ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಮತ್ತೆ ಕನ್ನಡಿಗರಿಗೆ ಉಂಡೆನಾಮ ಹಾಕಿದೆ. ಭಾನುವಾರ ನಡೆದ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ನೇಮಕದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ, ಇಂಗ್ಲಿಷ್ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಸಂವಿಧಾನಕ್ಕೆ ಎಸಗಿದ ಅಪಚಾರ
ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 9212 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ದುರಂತವೆಂದರೆ, ಇಷ್ಟು ಹುದ್ದೆಗಳನ್ನು ಬಯಸುವ ಅಭ್ಯರ್ಥಿಗಳು ಹಿಂದಿ, ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆದಿದ್ದಾರೆ ಮತ್ತು ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಬರೆಯುವುದನ್ನು ನಿರಾಕರಿಸುವುದು ಎಂದರೆ ಸಂವಿಧಾನಕ್ಕೆ ಎಸಗಿದ ಅಪಚಾರ.
ಒಕ್ಕೂಟ ವ್ಯವಸ್ಥೆಗೆ ಮಾರಣಾಂತಿಕ ಪೆಟ್ಟು
ಕೇಂದ್ರ ಸರಕಾರ ತನ್ನ ಸುಪರ್ದಿಯಲ್ಲಿ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷಿನಲ್ಲೇ ನಡೆಸುತ್ತಿದೆ. ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆ ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶ. ಇದು ಸ್ಪಷ್ಟ. ಅಷ್ಟೇ ಅಲ್ಲ, ಈ ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳು ಹಿಂದಿ ಭಾಷೆಗೆ ಸಂಬಂಧಿಸಿದವು. ಅಲ್ಲಿಗೆ ಸ್ಪಷ್ಟ; ಹಿಂದಿಯೇತರ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಆಯ್ಕೆ ಆಗಲೇಬಾರದು ಹಾಗೂ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಗೆ ಇದು ಕೇಂದ್ರವೇ ಕೊಟ್ಟ ಮಾರಣಾಂತಿಕ ಪೆಟ್ಟು.
ದೊಡ್ಡ ಹೋರಾಟಕ್ಕೆ ನಾಂದಿ ಆದೀತು
ತಮ್ಮ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಅನ್ಯಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾದ ಕರ್ಮ ದಕ್ಷಿಣ ಭಾರತ ರಾಜ್ಯಗಳ ಜನರದ್ದು. ಕನ್ನಡಿಗರೂ ಸೇರಿ ದಕ್ಷಿಣದ ಎಲ್ಲ ಭಾಷಿಕರು ಈ ಬಗ್ಗೆ ವಿರೋಧ ಮಾಡುತ್ತಲೇ ಇದ್ದರೂ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಮುಂದುವರಿಸಿದೆ. ಮುಲಾಜಿಲ್ಲದೆ ಸಿಆರ್‌ಪಿಎಫ್ ನೇಮಕಾತಿಯ ಮರು ಪರೀಕ್ಷೆ ನಡೆಸಬೇಕು ಹಾಗೂ ಕನ್ನಡ ಸೇರಿ ದೇಶದ ಎಲ್ಲ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿ ಆದೀತು ಎಂದು ಎಚ್ಡಿಕೆ ಎಚ್ಚರಿಕೆಯನ್ನು ನೀಡಿದ್ದಾರೆ.