ನ್ಯೂಸ್

ಚಿಕನ್​ ಅಂಗಡಿ ಮೇಲೆ ಯುದ್ಧ ಸಾರಿದ ಕಾಗೆಗಳು? ಹೀಗೇಕಾಯ್ತು ಗೊತ್ತಾ?

ವಿಜಯವಾಡ: ನೆರೆಹೊರೆಯವರು ತೊಂದರೆಗೆ ಸಿಲುಕಿದ್ದರೂ ಕ್ಯಾರೇ ಎನ್ನದೆ, ತಾವಾಯಿತು - ತಮ್ಮ ಕೆಲಸವಾಯಿತೆಂದು ಸಹಾಯವೆಂಬ ಪದವನ್ನೇ ಮರೆತು ಬದುಕುತ್ತಿರುವ ಇಂದಿನ ಸ್ವಾರ್ಥದ ಸಮಾಜಕ್ಕೆ ಇಲ್ಲೊಂದು ಕಾಗೆಗಳ ಗುಂಪು ವರ್ತಿಸಿರುವ ರೀತಿ ಮಾದರಿಯಾಗಿದೆ. ಒಂದು ಕಾಗೆ ಚಿಕನ್​ ಅಂಗಡಿಗೆ ಬಂದು ಆಪತ್ತಿಗೆ ಸಿಕ್ಕಿಕೊಂಡಾಗ ನೂರಾರು ಕಾಗೆಗಳು ಆ ಆಗಡಿ ಬಳಿ ದಾಂಗುಡಿ ಇಟ್ಟು ರಕ್ಷಣೆಗೆ ದಾವಿಸಿವೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮನಕಲಕುವಂತಿದೆ.

ಆಂಧ್ರ ಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ತಾಟಿಪಕ ಡೈಲಿ ಮಾರುಕಟ್ಟೆ ಇಂತಹ ಅಭೂತಪೂರ್ವ ಘಟನೆಗೆ ಸಾಕ್ಷಿಯಾಗಿದೆ. ಇಲ್ಲಿ ಹಲವು ಕೋಳಿ ಅಂಗಡಿಗಳಿದ್ದು, ಒಂದು ಚಿಕನ್ ಶಾಪ್ ಎದುರು ಕಾಗೆಯೊಂದು ನಿತ್ಯ ಬಂದು ತ್ಯಾಜ್ಯದಲ್ಲಿ ಆಹಾರ ಆರಿಸಿಕೊಳ್ಳುತ್ತಿತ್ತು. ಆದರೆ ಅದರ ಮಾಲಿಕ ಈ ಕಾಗೆ ಕಾಟ ತಾಳದೆ ಹಗ್ಗದಿಂದ ಅದರ ಕಾಲನ್ನು ಕಟ್ಟಿಹಾಕಿದ್ದಾನೆ.

ಇದರಿಂದ ಕಾಗೆ ಅಲ್ಲಿಂದ ಮುಂದೆ ಹಾರಲಾಗದೆ ಕಾವ್.. ಕಾವ್.. ಎಂದು ಜೋರಾಗಿ ಕಿರುಚಿಕೊಂಡಿದೆ. ಆಗ ಕೆಲ ಹೊತ್ತಿನಲ್ಲೇ ನೂರಾರು ಕಾಗೆಗಳು ಸ್ಥಳಕ್ಕೆ ಬಂದು ಅಂಗಡಿ ಸುತ್ತ ಜಮಾಯಿಸಿವೆ. ಎಲ್ಲ ಕಾಗೆಗಳು ಜೋರಾಗಿ ಕಿರುಚುತ್ತ ಅಂಗಡಿಗೆ ದಾಳಿ ಮಾಡಿವೆ. ಇದು ಅಲ್ಲಿದ್ದ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಡೆಗೆ ಮಾರ್ಕೆಟ್ ನಲ್ಲಿದ್ದ ಜನರೆಲ್ಲ ಅಲ್ಲಿಗೆ ಬಂದು ಕೋಳಿ ಅಂಗಡಿಯ ಮಾಲೀಕರಿಗೆ ಕಾಗೆಯನ್ನು ಬಿಡುವಂತೆ ಹೇಳಿದ್ದಾರೆ. ಆಗ ಕೋಳಿ ಅಂಗಡಿ ಮಾಲೀಕ ಕಾಗೆಯನ್ನು ಹಗ್ಗದಿಂದ ತಪ್ಪಿಸಿದ್ದು, ಅದು ಕಾಗೆಗಳ ಗುಂಪು ಸೇರಿಕೊಂಡಿದೆ. ಬಳಿಕ ಕಾಗೆಗಳೆಲ್ಲ ಅಲ್ಲಿಂದ ಹೊರಟು ಹೋಗಿವೆ.

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಒಂದು ಕಾಗೆ ಅಪಾಯದಲ್ಲಿದ್ದರೆ ನೂರಾರು ಕಾಗೆಗಳ ಹಿಂಡು ಬರುತ್ತವೆ. ಅದೇ ಜನರು ವ್ಯಕ್ತಿಯೊಬ್ಬ ಅಪಾಯದಲ್ಲಿದ್ದೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ಸ್​ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೆಂಡಿಂಗ್ ಸೃಷ್ಟಿಸಿದೆ.