ನ್ಯೂಸ್

ಅಬಕಾರಿ ಆದಾಯಕ್ಕೆ ಅಡ್ಡಹಾದಿ; ಶೇ.80 ಸನ್ನದು ಪಡೆಯಲು ಜನಪ್ರತಿನಿಧಿಗಳು, ಆಪ್ತರ ಪೈಪೋಟಿ

ಹರೀಶ್ ಬೇಲೂರು ಬೆಂಗಳೂರು

ದೆಹಲಿ ಮಾದರಿಯಲ್ಲಿ ರಾಜ್ಯದಲ್ಲೂ ‘ಅಬಕಾರಿ ಹಗರಣ’ವೊಂದು ನಿಧಾನಕ್ಕೆ ಸುರುಳಿ ಬಿಚ್ಚಿಕೊಳ್ಳಲು ವೇದಿಕೆ ಸಜ್ಜಾಗುತ್ತಿದೆಯೇ? ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯೊಂದು ಇಂಥ ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ ಅಸ್ತಿತ್ವದಲ್ಲಿಲ್ಲದ ಮದ್ಯದಂಗಡಿಗಳನ್ನು ಕಾನೂನುಬಾಹಿರವಾಗಿ ಹರಾಜು ಹಾಕಲು ಅಬಕಾರಿ ಇಲಾಖೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಕಳೆದೊಂದು ವರ್ಷದಿಂದ ನಡೆಯುತ್ತಿದ್ದ ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಸನ್ನದುಗಳನ್ನು ಬಹಿರಂಗ ಹರಾಜು ಹಾಕಲು ನೆರೆಯ ತೆಲಂಗಾಣ ಮಾದರಿ ಅನುಸರಿಸಲು ಮುಂದಾಗಿರುವ ರಾಜ್ಯ ಅಬಕಾರಿ ಇಲಾಖೆ, ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಮದ್ಯದಂಗಡಿ ಲೈಸೆನ್ಸ್​ಗಳು ಬಂಡವಾಳಶಾಹಿಗಳ ಪಾಲಾಗುವ ಆತಂಕವೂ ಸೃಷ್ಟಿಯಾಗಿದೆ.

ದೆಹಲಿ ಸರ್ಕಾರವು 2021-22ನೇ ಸಾಲಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶದಿಂದ 849 ಮದ್ಯದ ಅಂಗಡಿಗಳನ್ನು ಬಹಿರಂಗ ಹರಾಜು ಹಾಕಲು ಸಜ್ಜಾಗಿತ್ತು. ಇದನ್ನು ವಿರೋಧ ಪಕ್ಷಗಳು, ಸಾರ್ವಜನಿಕರು ಮತ್ತು ಸಾಮಾಜಿಕ ಹೋರಾಟಗಾರರು ತೀವ್ರವಾಗಿ ವಿರೋಧಿಸಿದ್ದರು. ಯಾವುದನ್ನೂ ಲೆಕ್ಕಿಸದ ಅಲ್ಲಿನ ಸರ್ಕಾರ ಅಬಕಾರಿ ನೀತಿ ರೂಪಿಸಿತ್ತು. ಅಂತಿಮವಾಗಿ ಕೇಜ್ರಿವಾಲ್ ನೇತೃತ್ವದ ಸರ್ಕಾರಕ್ಕೆ ಅಬಕಾರಿ ಹಗರಣ ಕಂಟಕವಾಗಿ ಪರಿಣಮಿಸಿತ್ತು. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಿಎಲ್-2 ಅಂಗಡಿಗಳನ್ನು ಬಹಿರಂಗವಾಗಿ ಹರಾಜು ಹಾಕಲು ಇಲಾಖೆಯಿಂದ ಸಿದ್ಧತೆ ನಡೆಯುತ್ತಿದೆ.

ನಿಯಮವೇನು?: ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್-2 ಹಾಗೂ 3,500 ಜನರಿಗೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಜನಕ್ಕೆ ಒಂದು ಸಿಎಲ್-2 ಹಾಗೂ 7,500 ಜನರಿಗೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ತಾಲೂಕಿನ ನಗರ ಪ್ರದೇಶಕ್ಕೆ ‘ಎ’ ಹಾಗೂ ಗ್ರಾಮೀಣ ಪ್ರದೇಶಕ್ಕೆ ‘ಬಿ’ ಎಂದು ಕೋಟಾ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿ 1987ರಲ್ಲಿ ನಿಯಮ 12ರಂತೆ ಅಂದಿನ ಸರ್ಕಾರವು ರಾಜ್ಯದ ಎಲ್ಲ ತಾಲೂಕಿಗೆ ಅನ್ವಯವಾಗುವಂತೆ ಕೋಟಾ ನಿಗದಿಪಡಿಸಿತ್ತು. ಅದರಂತೆ ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ ಒಟ್ಟು 4,206 ಸಿಎಲ್-2 ಅಂಗಡಿಗಳನ್ನು ನಿಗದಿಪಡಿಸಲಾಗಿದೆ.

ಪ್ರಸ್ತುತ ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ ಒಟ್ಟು 3,948 ಸಿಎಲ್-2 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಕೋಟಾದಡಿ ಮಂಜೂರಾಗಿ ಸ್ಥಗಿತಗೊಂಡ ಸನ್ನದು, ನವೀಕರಿಸದೆ ಬಾಕಿ ಉಳಿದ ಸಿಎಲ್-2 ಸನ್ನದುಗಳನ್ನು ಎಂಎಸ್​ಐಎಲ್​ಗೆ 2009 ಮತ್ತು 2016ರಲ್ಲಿ ನೀಡಲಾಗಿದೆ. ಹೀಗಿರುವಾಗ, ಆದಾಯ ನೆಪವೊಡ್ಡಿ ಇಲಾಖೆಯ ಅಧಿಕಾರಿಗಳು, ಸರ್ಕಾರಕ್ಕೆ ತಪು್ಪ ಮಾಹಿತಿ ನೀಡಿ ಅಸ್ತಿತ್ವದಲ್ಲಿಲ್ಲದ ಮದ್ಯದಂಗಡಿಗಳನ್ನು ಹರಾಜು ಹಾಕಲು ಯತ್ನಿಸುತ್ತಿರುವ ಆರೋಪಗಳು ಕೇಳಿಬಂದಿವೆ.

ಆದೇಶ ಪಾಲಿಸದ ಅಧಿಕಾರಿ ವರ್ಗ: ಸಿಎಲ್-2 ಕೋಟಾದಡಿ ನಿಗದಿಗಿಂತ ಹೆಚ್ಚುವರಿಯಾಗಿ ಮಂಜೂರು ಆಗಿದ್ದ 385 ವೈನ್​ಶಾಪ್ ರದ್ದುಪಡಿಸುವಂತೆ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಇಲಾಖೆ ಉಲ್ಲಂಘಿಸಿದೆ. ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್-2 ಶಾಪ್​ಗಳನ್ನು 1987ರಲ್ಲಿ ನಿಗದಿಪಡಿಸಿ 1994ರಲ್ಲಿ ಆಗಿನ ಸರ್ಕಾರ ರದ್ದುಪಡಿಸಿತ್ತು. 1999ರಲ್ಲಿ ನಡೆದ ಪ್ರಕರಣದಲ್ಲಿ ಹೈಕೋರ್ಟ್ ಕೂಡ ಹೆಚ್ಚುವರಿಯಾಗಿ ಮಂಜೂರಾಗಿದ್ದ ಸಿಎಲ್-2 ವೈನ್​ಶಾಪ್ ರದ್ದುಪಡಿಸುವಂತೆ ಆದೇಶಿಸಿತ್ತು. 2018ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದರೂ ಇಲಾಖಾ ಅಧಿಕಾರಿಗಳು ಪಾಲಿಸುತ್ತಿಲ್ಲ. ಈ ಅಂಶವನ್ನು ಅಧಿಕಾರಿಗಳು ಬೇಕೆಂದೇ ಮರೆಮಾಚುತ್ತಿರುವ

2 ಸಾವಿರ ಕೋಟಿ ರೂ. ಆದಾಯ?: 235 ವೈನ್​ಶಾಪ್ (ಸಿಎಲ್-2) ಹಾಗೂ 271 (ಸಿಎಲ್11-ಸಿ) ಸನ್ನದು ಸೇರಿ ಒಟ್ಟು 506 ಸನ್ನದುಗಳನ್ನು ತೆಲಂಗಾಣ ಮಾದರಿಯಲ್ಲಿ ಅರ್ಜಿ ಶುಲ್ಕ ಮರುಪಾವತಿಗೆ ಅವಕಾಶ ಇಲ್ಲದಂತೆ ಕ್ರಮವಹಿಸಿ ಹರಾಜು ಹಾಕಿದರೆ 2 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಈ ಸನ್ನದುಗಳನ್ನು ಬೇಡಿಕೆಗೆ ಅನುಗುಣವಾಗಿ ಸ್ಥಳ ಗುರುತಿಸಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ಹರಾಜು ಶುಲ್ಕವನ್ನು ಹೆಚ್ಚುವರಿಯಾಗಿ ನಿಗದಿಪಡಿಸಬಹುದೆಂದು ಅಧಿಕಾರಿಗಳ ಲೆಕ್ಕಚಾರ. ಸಿಎಲ್2, ಸಿಎಲ್9 ಮದ್ಯದಂಗಡಿ ತೆರೆಯುವುದಕ್ಕೆ ಸದ್ಯ ಪರವಾನಗಿ ನೀಡುತ್ತಿಲ್ಲ. 1991ರ ಮುನ್ನ ಶುಲ್ಕ ಪಾವತಿಸಿ ಇವುಗಳನ್ನು ತೆರೆಯಲಾಗುತ್ತಿತ್ತು. ಅಂದಿನಿಂದ ಈವರೆಗೆ ಮದ್ಯದಂಗಡಿ ಮಾಲೀಕರು

ಪ್ರತಿ ವರ್ಷ ಲಕ್ಷಾಂತರ ರೂ. ಪಾವತಿಸಿ ಪರವಾನಗಿ ನವೀಕರಣ ಮಾಡಿಸಿಕೊಳ್ಳುತ್ತಿದ್ದಾರೆ. ಹರಾಜು ಮೂಲಕ ಲೈಸೆನ್ಸ್ ಮಾರಾಟ ಮಾಡಲು ಮುಂದಾದರೆ ಪೈಪೋಟಿ ಎದುರಾಗಲಿದ್ದು, ಒಂದು ಲೈಸೆನ್ಸ್​ಗೆ 4-5 ಕೋಟಿ ರೂ.ಗೆ ಸೇಲ್ ಆಗಬಹುದು. ಹೊಸದಾಗಿ ಸಿಎಲ್7 ಮದ್ಯದಂಗಡಿ ತೆರೆಯಲು ಮಾತ್ರ ಇಲಾಖೆಯವರು ಲೈಸೆನ್ಸ್ ನೀಡುತ್ತಿದ್ದು, ಇದಕ್ಕೆ ಒಂದು ಕೋಟಿ ರೂ. ಬಂಡವಾಳ ಅಗತ್ಯ.

ವಾಸ್ತವವೇನು?

  • 2009ರಲ್ಲಿ ನವೀಕರಣ ಗೊಳ್ಳದ 463 ಸನ್ನದು ಎಂಎಸ್​ಐಎಲ್​ಗೆ
  • ಇವುಗಳಲ್ಲಿ ಸ್ಥಗಿತಗೊಂಡ 125 ಸನ್ನದುಗಳು ಒಳಗೊಂಡಿವೆ
  • ಇದರಿಂದಾಗಿ ಕೋಟಾದಡಿ ಯಾವುದೇ ಸನ್ನದು ಬಾಕಿ ಉಳಿದಿಲ್ಲ
  • ಬಾಕಿ ಸನ್ನದಿಗಾಗಿ ಇಲಾಖೆಗೆ ಹಣ ಪಾವತಿಸಿರುವ ಅರ್ಜಿದಾರರು
  • ವಾಸ್ತವ ಮರೆಮಾಚಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಆರೋಪ

ವೈನ್​ಶಾಪ್​ಗಳ ಕೋಟಾ ಬಗ್ಗೆ ವಿಸõತವಾಗಿ ರ್ಚಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇಲಾಖೆಯ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ದಾಖಲೆಗಳ ಪ್ರಕಾರ ಸಿಎಲ್2 ಕೋಟಾವೇ ಇಲ್ಲ. ಆದರೆ, ಕೋಟಾ ಕುರಿತು ಖಾತರಿ ಮಾಡಿಕೊಳ್ಳದೆ ಜಾರಿಗೆ ತರಲು ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ.

| ಗೋವಿಂದರಾಜು ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್