ನ್ಯೂಸ್

'ನಾನೇನೂ ಕದ್ದುಮುಚ್ಚಿ ಮಾಡಲಿಲ್ಲ..ಎಲ್ಲವನ್ನೂ ಬಹಿರಂಗವಾಗಿಯೇ ಮಾಡಿದ್ದೇನೆ..' : ಆಗೊಮ್ಮೆ ಸೈಲೆಂಟ್​ ಆಗಿ ಬಿಜೆಪಿ ಬೆಂಬಲಿಸಿದ್ದ ಅಜಿತ್ ಪವಾರ್​ಗೆ ಈಗೇನಾಯ್ತು?

ಮುಂಬೈ: ಕಳೆದ ನವೆಂಬರ್​ನಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅದೆಂಥಾ ಹೈಡ್ರಾಮಾ ನಡೆದಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಒಂದೆಡೆ ಶಿವಸೇನೆ-ಕಾಂಗ್ರೆಸ್​-ಎನ್​ಸಿಪಿ ಮೈತ್ರಿ ಮಾಡಿಕೊಳ್ಳಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರೆ, ಎನ್​ಸಿಪಿ ಮುಖಂಡ ಅಜಿತ್​ ಪವಾರ್​ ರಾತ್ರೋರಾತ್ರಿ ಬಿಜೆಪಿಗೆ ಬೆಂಬಲ ನೀಡಿದ್ದರು. ಬೆಳ್ಳಂಬೆಳಗ್ಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮತ್ತೆ ಬೆಂಬಲವನ್ನು ವಾಪಸ್​ ಪಡೆದು ಪಕ್ಷಕ್ಕೆ ಮರಳುವ ಮೂಲಕ ಬಿಜೆಪಿ ಸರ್ಕಾರ ಪತನಗೊಂಡಿತ್ತು.

ಅಂದಿನ ತಮ್ಮ ಅಲ್ಪಕಾಲದ ಬಂಡಾಯದ ಬಗ್ಗೆ ಅಜಿತ್ ಪವಾರ್​ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಆಗಿದ್ದು ಆಗಿ ಹೋಯಿತು ಎಂಬ ಧೋರಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ನಾನು ಏನು ಮಾಡಿದೆನೋ ಅದನ್ನು ಬಹಿರಂಗವಾಗಿಯೇ ಮಾಡಿದ್ದೇನೆ. ಕದ್ದುಮುಚ್ಚಿ ಏನೂ ಕುತಂತ್ರ ಮಾಡಲಿಲ್ಲ. ಬಳಿಕ ನಾನು ಅದನ್ನು ಸರಿಪಡಿಸಿಕೊಂಡೆ. ಅಲ್ಲಿಂದ ವಾಪಸ್​ ಬಂದೆ. ಸದ್ಯಕ್ಕೆ ನಾನು ಈ ಸರ್ಕಾರದಲ್ಲಿಯೇ ದೃಢವಾಗಿ ಇದ್ದೇನೆ ಎಂದು ಹೇಳಿದ್ದಾರೆ.

ಈಗಿನ ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಕೂಡ ಉಪಮುಖ್ಯಮಂತ್ರಿಯಾಗಿರುವ ಅಜಿತ್​ ಪವಾರ್ ಹಣಕಾಸು ಖಾತೆಯನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್​ಗೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ರೀತಿ ಮಾತನಾಡಿದ್ದಾರೆ. (ಏಜೆನ್ಸೀಸ್​)