ಸೊರಬ: ಬೆಳೆ ಸಮೀಕ್ಷೆ ಉತ್ತಮ ಕಾರ್ಯವಾಗಿದ್ದು ಬೆಳೆಯ ದತ್ತಾಂಶ ಆಧರಿಸಿ ರೈತರಿಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ಈ ನಿಟ್ಟಿನಲ್ಲಿ ಸಮೀಕ್ಷೆಯ ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್ ತಿಳಿಸಿದರು.
ಪಟ್ಟಣದ ರಂಗ ಮಂದಿರದಲ್ಲಿ ಬೆಳೆ ಸಮೀಕ್ಷೆಯ ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಳೆ ಸಮೀಕ್ಷೆ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಾದ ಬೆಳೆ ವಿಸ್ತೀರ್ಣ ಎಣಿಕೆ ಕಾರ್ಯ, ಕಟಾವು ಪ್ರಯೋಗ, ಬೆಳೆ ಹಾನಿ ಪರಿಹಾರ, ವಿಮೆ, ಕನಿಷ್ಠ ಬೆಂಬಲ ಬೆಲೆ ನಿಗದಿ, ಬ್ಯಾಂಕುಗಳಲ್ಲಿ ಸಾಲ ಮಂಜೂರಾತಿ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಯಲ್ಲಿ ಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಸರ್ವೇ ನಂಬರ್‌ವಾರು ಬೆಳೆ ಪ್ರದೇಶದ ನಿಖರವಾದ ಮಾಹಿತಿ ಹಾಗೂ ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು. ತಪ್ಪು ಎಸಗಿದರೆ ರೈತರಿಗೆ ಸಮಸ್ಯೆಯಾಗುತ್ತದೆ ಎಂದರು.
ರೈತರು ತಮ್ಮ ನಿಖರ ಬೆಳೆಯ ಮಾಹಿತಿಯನ್ನು ಖಾಸಗಿ ಸಮೀಕ್ಷೆಯ ನಿವಾಸಿಗಳಿಗೆ ನೀಡುವ ಮೂಲಕ ಸಹಕಾರ ನೀಡಬೇಕು. ದಾಖಲಿಸಿದ ಬೆಳೆಯ ಮಾಹಿತಿ ರೈತರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ರೈತರು ಬೆಳೆ ದರ್ಶಕ್ ಆ್ಯಪ್ ಮೂಲಕ ಪರಿಶೀಲಿಸಿ ವ್ಯತ್ಯಾಸವಿದ್ದರೆ ಸರಿಪಡಿಸಿಕೊಳ್ಳಬಹುದಾಗಿದೆ. ಅಲ್ಲದೆ ರೈತರು ನನ್ನ ಬೆಳೆ ನನ್ನ ಹಕ್ಕು ಎಂಬ ಶೀರ್ಷಿಕೆಯಡಿ ತಾವು ಜಮೀನಲ್ಲಿ ಬೆಳೆದ ಬೆಳೆಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. 2024-25ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆ ಅಡಿ ಪ್ರಶಸ್ತಿಗೆ ಆಹ್ವಾನಿಸಿದ್ದು ನೀರಾವರಿ ಭತ್ತದ ಬೆಳೆಗೆ ರೈತ ಮತ್ತು ರೈತ ಮಹಿಳೆಯರಿಗೆ ಪ್ರತ್ಯೇಕ ಅರ್ಜಿ ಹಾಗೂ ಕೃಷಿ ಭಾಗ್ಯ ಯೋಜನೆ ಅಡಿ ಅರ್ಜಿ ಅಹ್ವಾನಿಸಲಾಗಿದೆ ಎಂದು ತಿಳಿಸಿದರು.
ಗ್ರೇಡ್-2 ತಹಸೀಲ್ದಾರ್ ನಾಗರಾಜ್ ಮಾತನಾಡಿ, ಖಾಸಗಿ ಸಮೀಕ್ಷೆದಾರರಿಂದ ಪರಿಣಾಮಕಾರಿಯಾಗಿ ಕೆಲಸ ತಗೆದುಕೊಳ್ಳಲು ಸಾಧ್ಯವಾಗಿದೆ. ಅಲ್ಲದೇ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಕಾರ್ಯದಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಉಳವಿ ಕೃಷಿ ಅಧಿಕಾರಿ ಪ್ರಜ್ವಲ್ ಬೆಳೆ ಸಮೀಕ್ಷೆ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕ ಮಂಜುನಾಥ, ಸೊರಬ ಕೃಷಿ ತಾಂತ್ರಿಕ ಅಧಿಕಾರಿ ಎನ್.ಕಾಂತರಾಜ್, ಕೃಷಿ ಅಧಿಕಾರಿಗಳಾದ ಶಂಕರ್, ವಿಜಯಕುಮಾರ, ಧನಂಜಯಪ್ಪ, ರಮೇಶ, ಪೂರ್ಣಿಮಾ, ನೇಮಚಂದ್ರ, ಆರ್‌ಐಗಳಾದ ವಿನಯಕುಮಾರ್, ಶಿವಪ್ರಸಾದ್, ತೋಟಗಾರಿಕಾ ಅಧಿಕಾರಿ ದೊರೆಸ್ವಾಮಿ,ನಾಗರಾಜ್, ಖಾಸಿಗೆ ಸಮೀಕ್ಷೆದಾರರು ಇದ್ದರು.