ನ್ಯೂಸ್

ದುಪ್ಪಟ್ಟು ಬೆಳೆ ಪರಿಹಾರ: ರಾಜ್ಯ ಸರ್ಕಾರಕ್ಕೆ ಆರ್.ಅಶೋಕ್ ಸವಾಲು

ಬೆಂಗಳೂರು: ಬರಗಾಲದಿಂದ ಬಸವಳಿದ ಅನ್ನದಾತರ ನೆರವಿಗೆ ತುರ್ತು ಧಾವಿಸಿಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ‘ಕೈ’ಕೊಟ್ಟಿತು. ಆದರೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ ನೈಜವಾಗಿ ಸ್ಪಂದಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಮರ್ಥಿಸಿಕೊಂಡರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ದುಪ್ಪಟ್ಟು ಬೆಳೆ ಪರಿಹಾರ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಈಗಲೂ ಡಬಲ್ ಪರಿಹಾರ ನೀಡಿ, ನಿಜವಾದ ಕಾಳಜಿ ತೋರಿಸಬೇಕು ಎಂದು ಸವಾಲೆಸೆದರು.

ಮುಂಗಾರು ಮಳೆ ಅಭಾವದಿಂದ 223 ತಾಲೂಕುಗಳನ್ನು ಬರ ಪೀಡಿತವೆಂದು ರಾಜ್ಯ ಸರ್ಕಾರ ತಡವಾಗಿ ೋಷಿಸಿತು. ಎನ್‌ಡಿಆರ್‌ಎ್ ಅಡಿಯಲ್ಲಿ ನೆರವು ಕೋರಿ ಸಲ್ಲಿಸಿದ ಮನವಿಗೆ ಕೇಂದ್ರ ಕೂಡಲೇ ಸ್ಪಂದಿಸಿತು.

ಬರ ಅಧ್ಯಯನಕ್ಕೆ ಕೇಂದ್ರ ತಂಡ ಕಳುಹಿಸಿ ವರದಿ ತರಿಸಿಕೊಂಡಿತು. ಸಂಬಂಧಿಸಿದ ಇಲಾಖೆಗಳ ಅಂತರ ಸಚಿವಾಲಯ ಸಭೆಗಳು ನಡೆದವು. ಬೇರೆ ಕೆಲವು ರಾಜ್ಯಗಳ ಪ್ರಕೃತಿ ವಿಕೋಪ ಪರಿಹಾರದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದರಿಂದ ಕೇಂದ್ರ ಅವುಗಳನ್ನು ಪರಿಗಣಿಸಬೇಕಾಯಿತು.

ನಿಯಮಾವಳಿ ಪ್ರಕಾರ ಪೂರಕ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ ನೀತಿ ಸಂಹಿತೆ ಜಾರಿಗೆ ಬಂತು. ರಾಜ್ಯಗಳ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಆಯೋಗಕ್ಕೆ ಪತ್ರ ಬರೆದು ಅನುಮತಿ ಪಡೆದುಕೊಂಡಿದೆ.

ಹೆಚ್ಚಿನ ಶ್ರಮವಿಲ್ಲ

ಕೇಂದ್ರ ಸರ್ಕಾರವೇ ಮುಂದಾಗಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಶ್ರಮವೇನಿಲ್ಲ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಆರ್.ಅಶೋಕ್ ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ತನ್ನ ಕೈಚಳಕ ತೋರಿಸಿ ಬರ ಪರಿಹಾರವನ್ನು ಲೂಟಿ ಮಾಡಬಾರದು. ನೇರ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದರ ಬಗ್ಗೆ ನಾವು ಕಾವಲು ಕಾಯುತ್ತೇವೆ. ನೇರ ನಗದು ವರ್ಗಾವಣೆಯೇ ಪಾರದರ್ಶಕತೆ ಕಾಯ್ದುಕೊಳ್ಳಲು ಸೂಕ್ತವಾಗಿದೆ ಎಂದರು.

ನೈತಿಕತೆಯಿಲ್ಲ

ಹಿಂದುಳಿದ ವರ್ಗಗಳ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲು ಶಿಾರಸು ಮಾಡಿ, ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು, ಇತರೆ ಹಿಂದುಳಿದ ವರ್ಗಗಳ ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದು ಟೀಕಿಸಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಬರಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಡಿಸಿಎಂ ಡಿ.ಕೆ.ಶಿವಕುಮಾರ್ ಸೋದರ ಡಿ.ಕೆ.ಸುರೇಶನನ್ನು ಮುಗಿಸಲು ಸಿದ್ದರಾಮಯ್ಯ ತಂತ್ರ ಮಾಡಿದ್ದಾರೆ ಎಂದರು.

ಮೊದಲ ಹಂತದ 14 ಕ್ಷೇತ್ರಗಳ ಪೈಕಿ 12ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಉರಿಬಿಸಿಲು ನಡುವೆಯೂ ಜನರು ಬಂದು ಮತದಾನ ಮಾಡಿದ್ದಾರೆ. ಎರಡನೇ ಹಂತದ ಎಲ್ಲ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.