ಖಾನಾಪುರ: ತಾಲೂಕಿನ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಂಬೇಗಾಳಿ ಗ್ರಾಮದ ಮನೆಯೊಂದರ ಮೇಲೆ ಗುರುವಾರ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿ ಮಾಂಸ ಮತ್ತು ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ಜಾಂಬೇಗಾಳಿ ಗ್ರಾಮದ ಮಹ್ಮದಲಿ ಹಲಸಿಕರ, ಮೌಲಾಲಿ ಹಲಸಿಕರ ಬಂಧಿತರು. ಬಂಧಿತರಿಂದ ಕಾಡುಕೋಣದ ಮಾಂಸ ಮತ್ತು ಜಿಂಕೆಯ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮತ್ತು ದಾಳಿ ಸಂದರ್ಭದಲ್ಲಿ ದೊರೆತ ವಸ್ತುಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಪ್ರಕರಣ ದಾಖಲಿಸಿದ್ದಾರೆ.
ನಾಗರಗಾಳಿ ಉಪ ವಿಭಾಗದ ಎಸಿಎಫ್ ಶಿವಾನಂದ ಮಗದುಮ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಾಗರಗಾಳಿ ಆರ್‌ಎಫ್‌ಒ ಪ್ರಶಾಂತ ಮಂಗಸೂಳಿ, ಕೇದಾರ ತೇಲಂಗಿ, ಸಂತೋಷ ಗೌಡರ, ಲಚ್ಯಾಣ, ಪ್ರವೀಣ ಕಮ್ಮಾರ ಇತರರಿದ್ದರು.