ಭೋಪಾಲ್: ರೌಡಿಶೀಟರ್ ಝುಬೈರ್ ಮೌಲಾನ್ ಎಂಬಾತ ತನ್ನ ಜೀಪಿನ ಬಾನೆಟ್ ಮೇಲೆ ನಿಂತುಕೊಂಡು ಸಂಚರಿಸಿದ್ದ. ಸಿನಿಮಾದ ಸಾಹಸ ದೃಶ್ಯದ ಸಂದರ್ಭದಲ್ಲಿ ರೌಡಿಗಳು ಹೇಗೆ ಜೀಪಿನಲ್ಲಿ ಬರುತ್ತಾರೋ, ಅದೇ ಶೈಲಿಯಲ್ಲಿ ಈತ ಕೂಡ ಮಧ್ಯರಸ್ತೆಯಲ್ಲಿ ಸಂಚರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾಗುತ್ತಿದ್ದಂತೆ ಎಚ್ಚೆತ್ತ ಗಾಂಧಿನಗರ ಪೊಲೀಸರು ಸಾಹಸ ಮೆರೆದ ರೌಡಿ ಶೀಟರನ್ನು ಬಂಧಿಸಿದ್ದಾರೆ.
ಮುಂಜಾನೆ 4 ಗಂಟೆಯ ಸುಮಾರಿಗೆ ಝುಬೈರ್ ಮೌಲಾನ್ ತನ್ನ ಜೀಪಿನ ಬಾನೆಟ್ ಮೇಲೆ ನಿಂತುಕೊಂಡು ಸಂಚಾರ ಮಾಡಿದ್ದಾರೆ. ಸ್ವಲ್ಪ ಎಡವಿದ್ದರೂ ದೊಡ್ಡ ಅವಾಂತರಕ್ಕೆ ದಾರಿ ಮಾಡಿಕೊಡುತ್ತಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಝುಬೈರ್ ಮೌಲಾನ್ ಜತೆಗೆ ಇನ್ನಿಬ್ಬರು ಬಾನೆಟ್ ಮೇಲಿದ್ದು, ಜೀಪಿನ ಅಕ್ಕಪಕ್ಕದಲ್ಲಿ ಇಬ್ಬರು ನೇತಾಡುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಚಲಿಸುತ್ತದ್ದ ಕಾರಿನಿಂದ ಜೀಪಿಗೆ ಹತ್ತಲು ಪ್ರಯತ್ನಿಸುತ್ತಿದ್ದಾನೆ. ಅಂತೆಯೇ ಒಂದು ಕಾರು ಹಿಮ್ಮುಖವಾಗಿ ಚಲಿಸುತ್ತಿರುವುದನ್ನು ಕಾಣಬಹುದು.
ಈ ಬಗ್ಗೆ ಗಾಂಧಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಅರುಣ್ ಶರ್ಮಾ ಪ್ರತಿಕ್ರಿಯಿಸಿದ್ದು, ಆರೋಪಿ ಝುಬೈರ್ ಮೌಲಾನ್ ಜೀಪಿನ ಬಾನೆಟ್ ಮೇಲೆ ನಿಂತುಕೊಂಡು ಸಂಚರಿಸುತ್ತಿದ್ದ. ಸನ್ನಿ ಮಲ್ಲಿಕ್ ಎಂಬಾತ ಜೀಪ್ ಡ್ರೈವಿಂಗ್ ಮಾಡುತ್ತಿದ್ದ. ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದು ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಿದ್ದೇವೆ ಎಂದು ಹೇಳಿದ್ದಾರೆ.
ಬಂಧನವಾಗಿರುವ ಝುಬೈರ್ ಮೌಲಾನ್ ಮೇಲೆ ಈಗಾಗಲೇ ವಿವಿಧ ಠಾಣೆಗಳಲ್ಲಿ 65 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮೌಲಾನಾ 2021ರಲ್ಲಿಯೂ ರಸ್ತೆ ಮಧ್ಯೆ ಕಾರಿನಲ್ಲಿ ಸಾಹಸ ಪ್ರದರ್ಶಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಇದೀಗ ಮತ್ತೆ ಅದೇ ಅಪರಾಧವನ್ನು ಪುನರಾವರ್ತಿಸಿದ್ದಾನೆ. ಹೀಗಾಗಿ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)