ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಖಾಕಿ ಪಡೆಯ ಕಟ್ಟೆಚ್ಚರದ ಕಾರ್ಯ ನಿರ್ವಹಣೆ ಪರಿಣಾಮ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ತುಸು ತಗ್ಗಿದೆ. 2023ರ ಸಾಲಿಗೆ ಹೋಲಿಸಿದರೆ, 2024ರಲ್ಲಿ ಸೇವಕರಿಂದ ಮನೆ ಕಳ್ಳತನ ಹೊರತುಪಡಿಸಿದರೆ ಕೊಲೆ, ಕೊಲೆ ಯತ್ನ, ಡಕಾಯಿತಿ, ಅತ್ಯಾಚಾರ, ರಾಬರಿ ಸೇರಿ ಗಂಭೀರ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಇದರಿಂದ ಸಿಲಿಕಾನ್ ಸಿಟಿ ಜನರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
2023ರಲ್ಲಿ 206 ಕೊಲೆ, 671 ರಾಬರಿ, ಹಗಲಲ್ಲೇ ಮನೆ ಕಳ್ಳತನದ 264 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 169 ಕೊಲೆ, 533 ರಾಬರಿ, ಹಗಲಲ್ಲೇ ಮನೆಗಳ್ಳತನದ 171 ಕೇಸ್ ವರದಿಯಾಗಿವೆ. ಅದೇ ರೀತಿ, 2023ರಲ್ಲಿ 537 ಕೊಲೆ ಯತ್ನ, 172 ಅತ್ಯಾಚಾರ, 1,151 ಅಪಹರಣ ಕೇಸ್ ದಾಖಲಾಗಿದ್ದರೆ, 2024ರಲ್ಲಿ 422 ಕೊಲೆ ಯತ್ನ, 165 ಅತ್ಯಾಚಾರ, 1,137 ಕಿಡ್ನ್ಯಾಪ್ ಪ್ರಕರಣ ಕಂಡುಬಂದಿವೆ. ಆದರೆ, ಮನೆ ಕೆಲಸದವರಿಂದ ಕಳ್ಳತನ ಪ್ರಕರಣಗಳು 320ರಿಂದ 352ಕ್ಕೆ ಏರಿಕೆಯಾಗಿದೆ. ಉಳಿದಂತೆ ಗಂಭೀರ ಅಪರಾಧ ಪ್ರಕರಣ ಇಳಿಮುಖವಾಗಿರುವುದು ನಗರ ಪೊಲೀಸ್ ಇಲಾಖೆಯ ಅಪರಾಧ ದಾಖಲಾತಿ ವಿಭಾಗದ ಅಂಕಿಅಂಶದಿಂದ (2024ರ ನ.31ರ ಅಂತ್ಯಕ್ಕೆ) ಬೆಳಕಿಗೆ ಬಂದಿದೆ.
ಹಳೇ ಪ್ರಕರಣಗಳಲ್ಲಿ ಆರೋಪಿಗಳ ಬಂಧನ, ಇ-ಬೀಟ್ ಹೆಚ್ಚಳ, ಸಿಸಿ ಕ್ಯಾಮರಾ ಅಳವಡಿಕೆ, ಕಮಾಂಡ್ ಸೆಂಟರ್, ಪೊಲೀಸ್ ಹೆಲ್ಪ್‌ಲೈನ್ 112 ಮತ್ತು ಹೊಯ್ಸಳ ಬೀಟ್ ಸೇರಿ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ರೌಡಿಗಳು ಮತ್ತು ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ಹಾಗೂ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿದ ಪರಿಣಾಮ ನಗರದಲ್ಲಿ ಅಪರಾಧ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೊಬೈಲ್, ಲ್ಯಾಪ್‌ಟಾಪ್ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಉದ್ದೇಶಕ್ಕೆ ಪೇಯಿಂಗ್ ಗೆಸ್ಟ್ಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಕಳ್ಳರ ಹೆಡೆಮುರಿ ಕಟ್ಟಲಾಗಿದೆ. ಅಲ್ಲದೆ, ಪೇಯಿಂಗ್ ಗೆಸ್ಟ್ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಸಿಸಿ ಕ್ಯಾಮರಾ, ಭದ್ರತಾ ಸಿಬ್ಬಂದಿ, ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಹೆಚ್ಚು ಅಪರಾಧ ಪ್ರಕರಣ ನಡೆಯುವ ತಾಣಗಳಲ್ಲಿ ಇ-ಬೀಟ್ ಹೆಚ್ಚಳ, ಹೊಯ್ಸಳ ಗಸ್ತು ತಿರುಗುವುದು, ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ ಪೋರ್ಟಬಲ್ ಸ್ಕ್ಯಾನರ್ ಬಳಕೆಯಿಂದಾಗಿ ಕಳ್ಳತನ ಕಡಿಮೆ ಆಗಲು ಕಾರಣವಾಯಿತು ಎನ್ನಲಾಗುತ್ತಿದೆ.
ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕದ್ದ ಮೊಬೈಲ್ಗಳನ್ನು ಮರು ಬಳಸದಂತೆ ತಡೆಯಲು ಹಾಗೂ ಸಿಇಐಆರ್ ಪೋರ್ಟಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಕಳೆದುಕೊಂಡವರು ದೂರು ನೀಡಿದ ಪರಿಣಾಮ ಮೊಬೈಲ್ ಬ್ಲಾಕ್ ಮಾಡಲಾಗುತ್ತಿದೆ. ಮೊಬೈಲ್ ಎಲ್ಲಿದೆ ಎಂಬುದನ್ನು ಈ ಮೂಲಕ ಪತ್ತೆ ಹಚ್ಚಬಹುದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ರೌಡಿಗಳ ಮೇಲೆ ನಿಗಾ
ಹತ್ಯೆ, ರಾಬರಿ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ರೌಡಿಗಳ ಮೇಲೆ ನಿಗಾ ವಹಿಸಿ ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿ ಜೈಲಿಗೆ ಕಳುಹಿಸಲಾಗುತ್ತಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೋರ್ಟ್‌ಗೆ ಗೈರಾಗಿದ್ದ ಹಳೆಯ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಅಪರಾಧ ಪ್ರಕರಣಗಳು ತಗ್ಗಿವೆ ಎನ್ನಲಾಗುತ್ತಿದೆ.
ಅಪರಾಧ ಪ್ರಕರಣಗಳ ಅಂಕಿಅಂಶ
ಪ್ರಕರಣಗಳು 2023 2024
ಕೊಲೆ 206 176
ಕೊಲೆ ಯತ್ನ 537 450
ಅತ್ಯಾಚಾರ 172 165
ಕಳ್ಳತನ (ಹಗಲು) 264 171
ಕಳ್ಳತನ (ರಾತ್ರಿ) 878 708
ಸೇವಕನಿಂದ ಕಳ್ಳತನ 320 352
ಅಪಹರಣ 1,151 1,137
ಡಕಾಯಿತಿ 37 33
ಗಲಭೆ 164 71
ವಂಚನೆ 3,476 2,799
ಬೈಕ್ ಕಳ್ಳತನ 5,908 4,954
ಸರಗಳ್ಳತನ 153 135
ಕಿರುಕುಳ 1,139 1,174
ವರದಕ್ಷಣೆ ಕಿರುಕುಳಕ್ಕೆ ಸಾವು 25 25
ನಿರ್ಲಕ್ಷ್ಯದಿಂದ ಸಾವು 168 149