ನ್ಯೂಸ್

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಅಪರಾಧ; ತಪ್ಪಿತಸ್ಥರನ್ನು ಉಳಿಸಬಾರದೆಂದು ‘ನಮೋ’ ಸೂಚನೆ

ಮುಂಬೈ: ಮಹಿಳೆಯರ ಮೇಲಿನ ದೌರ್ಜನ್ಯವು ಕ್ಷಮಿಸಲಾಗದ ಪಾಪ, ತಪ್ಪಿಸ್ಥರನ್ನು ಉಳಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಅವರ ಸುರಕ್ಷತೆಯೂ ದೇಶದ ಆದ್ಯತೆಯಾಗಿದೆ. ನಾನು ಈ ವಿಷಯವನ್ನು ಕೆಂಪು ಕೋಟೆಯಿಂದ ಪದೇಪದೆ ಪ್ರಸ್ತಾಪಿಸಿದ್ದೇನೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರ ಮೇಲಿನ ದೌರ್ಜನ್ಯವು ಅಕ್ಷಮ್ಯ ಪಾಪ ಎಂದು ಮತ್ತೊಮ್ಮೆ ದೇಶದ ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ, ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ಹೇಳುತ್ತೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಅಪರಾಧಿಗಳಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡುವವರನ್ನು ಬಿಡಬಾರದು. ಆಸ್ಪತ್ರೆಯಾಗಿರಲಿ, ಶಾಲೆಯಾಗಿರಲಿ, ಸರ್ಕಾರವಿರಲಿ, ಪೊಲೀಸ್ ವ್ಯವಸ್ಥೆಯಾಗಿರಲಿ ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ನಡೆದರೂ ಎಲ್ಲರೂ ಜವಾಬ್ದಾರರಾಗಿರಬೇಕು ಎಂದು ಸೂಚಿಸಿದ್ದಾರೆ. ಮಹಿಳೆಯರ ಜೀವ ರಕ್ಷಿಶಿಸುವುದು ಹಾಗೂ ಅವರ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ ಪ್ರಧಾನಿ ಅವರ ಈ ಹೇಳಿಕೆ ಬಂದಿದೆ.(ಏಜೆನ್ಸೀಸ್​​)