ನ್ಯೂಸ್

ಕ್ರೆಡಿಟ್ ಕಾರ್ಡ್ ನೆಪದಲ್ಲಿ ಧೋಖಾ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಸರ್ಕಾರಿ ಕಾಲೇಜೊಂದರ ಉಪನ್ಯಾಸಕರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳರು ಬ್ಲ್ಯಾಕ್‌ಮೇಲ್ ಮಾಡಿ 4.50 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ಬೃಂದಾವನನಗರದ ಉಪನ್ಯಾಸಕ ವಂಚನೆಗೆ ಒಳಗಾದವರು. ಇವರು ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 7ರಂದು ಉಪನ್ಯಾಸಕರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ‘ನಿಮ್ಮ ಬ್ಯಾಂಕ್ ಖಾತೆಯ ಕ್ರೆಡಿಟ್ ಕಾರ್ಡ್’ ಅನ್ನು ಮುಂಬೈನಲ್ಲಿ ಮನಿ ಲ್ಯಾಂಡರಿಂಗ್‌ನಲ್ಲಿ ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾರೆ. ಭಯಗೊಂಡ ಉಪನ್ಯಾಸಕನಿಗೆ ಮತ್ತೆ ಮತ್ತೊಬ್ಬ ಕರೆ ಮಾಡಿ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯ ಮಾಡಿಕೊಂಡು ‘ನಿಮ್ಮ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಬೇಕು. ಬ್ಯಾಂಕ್ ವಿವರ ಕೊಡುವಂತೆ’ ಸೂಚಿಸಿದ್ದಾನೆ.

ಹೆದರಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಸೈಬರ್ ಕಳ್ಳರು ವ್ಯಾಲೆಟ್ ಮೂಲಕ ಹಂತ ಹಂತವಾಗಿ 4.50 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ನೊಂದ ಉಪನ್ಯಾಸ, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.