ನ್ಯೂಸ್

ದೇಗುಲ ತೆರೆಯುವ ವಿಚಾರಕ್ಕೆ ವಾಗ್ವಾದ

Mysuru Rural

ನಂಜನಗೂಡು: ತಾಲೂಕಿನ ತಗಡೂರು ಗ್ರಾಮದಲ್ಲಿ ಸಪ್ತ ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕ ತರುವ ವಿಚಾರವಾಗಿ ಅರ್ಚಕರು ಹಾಗೂ ಟ್ರಸ್ಟ್ ನಡುವೆ ಕಂದಕ ಸೃಷ್ಟಿಯಾಗಿದ್ದು, ಭಾನುವಾರ ದೇವಾಲಯ ತೆರೆಯುವ ವಿಚಾರಕ್ಕೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಗ್ರಾಮದ ಕುರುಬ ಸಮುದಾಯ ಬಡಾವಣೆಯಲ್ಲಿರುವ ಧರೆಗೆ ದೊಡ್ಡವರು, ಮಲ್ಲೇಶ್ವರ, ದೊಡ್ಡಮಾರಮ್ಮ ಸೇರಿದಂತೆ ಸಪ್ತ ದೇವಾಲಯಗಳ ಆಡಳಿತ ನಿರ್ವಹಣೆ ವಿಚಾರದಲ್ಲಿ ಎದ್ದಿರುವ ಅಪಸ್ವರದಿಂದಾಗಿ ಭಾನುವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ಭಕ್ತರಿಗೆ ಅದರ ಬಿಸಿ ತಟ್ಟಿತು. ಅರ್ಚಕರ ಪರವಾಗಿ ವಕಾಲತ್ತು ವಹಿಸಲು ಬಂದ ಕೆಲ ಭಕ್ತರಿಗೆ ಗ್ರಾಮಸ್ಥರು ಛೀಮಾರಿ ಹಾಕಿದರು. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆದಿದ್ದರಿಂದ ದೇವಾಲಯ ತೆರೆಯಲು ಅವಕಾಶ ದೊರೆಯಲಿಲ್ಲ.

ಏನಿದು ವಿವಾದ?: ಗ್ರಾಮದ ಸಪ್ತ ದೇವಾಲಯಗಳ ಆದಾಯ ಹಾಗೂ ಆಡಳಿತ ನಿರ್ವಹಣೆಯನ್ನು ಆಯಾ ದೇವಾಲಯಗಳ ಅರ್ಚಕರೇ ನಿಭಾಯಿಸುತ್ತಿದ್ದು, ದೇವಾಲಯಗಳ ಆದಾಯ ಕೆಲವರ ಸ್ವತ್ತಾಗಿದೆ. ಹೀಗಾಗಿ ಅದು ದೇವಾಲಯದ ಸ್ವತ್ತಾಗಬೇಕೆಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ 16 ಸದಸ್ಯರೊಳಗೊಂಡ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಚಕ ವೃಂದ ನ್ಯಾಯಾಲಯ ಮೆಟ್ಟಿಲು ಏರಿದೆ. ಹೀಗಾಗಿ ಅರ್ಚಕರು ಹಾಗೂ ಟ್ರಸ್ಟ್ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ.

ಮಹಾಶಿವರಾತ್ರಿ ಪೂಜೆಯೂ ಸ್ಥಗಿತ: ಪ್ರತಿ ಮಹಾಶಿವರಾತ್ರಿ ದಿನ ಸಪ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಅರ್ಚಕರು ಹಾಗೂ ಟ್ರಸ್ಟ್ ನಡುವೆ ವಿವಾದ ತೀವ್ರ ಸ್ವರೂಪ ಪಡೆದು ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿವಾದ ಬಗೆಹರಿಯುವವರೆಗೂ ದೇವಾಲಯಗಳ ಬಾಗಿಲು ತೆರೆಯದೆ ಯಥಾಸ್ಥಿತಿ ಕಾಪಾಡುವಂತೆ ತಾಲೂಕು ಆಡಳಿತ ನಿರ್ದೇಶನ ನೀಡಿತು. ಪರಿಣಾಮ ಈ ವರ್ಷ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪೂಜೆ ಸ್ಥಗಿತಗೊಂಡಿತು.

ತಹಸೀಲ್ದಾರ್ ಭೇಟಿ, ದೇವಾಲಯದಲ್ಲಿ ಪೂಜೆ: ತಗಡೂರಿನಲ್ಲಿ ಪರಿಸ್ಥಿತಿ ಜಟಿಲಗೊಳ್ಳುತ್ತಿದ್ದಂತೆ ಭಾನುವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ದೊಡ್ಡಮಾರಮ್ಮ ದೇವಾಲಯದ ಬಾಗಿಲು ತೆರೆಸಿ ಅಮಾವಾಸ್ಯೆ ಪೂಜೆಗೆ ಅನುವು ಮಾಡಿಕೊಟ್ಟರು. ನಿಮ್ಮ ನಡುವಿನ ವಿವಾದವನ್ನು ಕುಳಿತು ಬಗೆಹರಿಸೋಣ. ಇಂದಿನ ಅಮಾವಾಸ್ಯೆ ಪೂಜೆಗೆ ಯಾವುದೇ ಭಂಗ ಆಗಬಾರದು ಎಂದು ಎರಡು ಗುಂಪಿನ ಮುಖಂಡರನ್ನು ಮನವೊಲಿಸಿ ಬಾಗಿಲು ತೆರೆಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸಿದರು. ದೊಡ್ಡಕವಲಂದೆ ಪಿಎಸ್‌ಐ ಅಮ್ಮಜಾನ್ ಇದ್ದರು.

ಸಪ್ತ ದೇವಾಲಯಗಳಿಗೆ ಅಪಾರ ಭಕ್ತವೃಂದವನ್ನು ಹೊಂದಿದೆ. ಹರಕೆ ಹೊತ್ತ ಭಕ್ತರು ಚಿನ್ನ, ಬೆಳ್ಳಿ, ನಗದು ರೂಪದಲ್ಲಿ ದೇವಾಲಯಕ್ಕೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಹುಂಡಿ ಇಟ್ಟಿಲ್ಲ. ಆದಾಯಕ್ಕೆ ಮಾತ್ರ ಯಾವುದೇ ಲೆಕ್ಕವಿಲ್ಲ. ಎಲ್ಲವನ್ನೂ ಅರ್ಚಕರು ಸ್ವಾಹ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ದೇವಾಲಯದ ಹೆಸರಲ್ಲಿ ಆದಾಯ ಶೇಖರಿಸಬೇಕೆಂಬ ದೃಷ್ಟಿಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಟ್ರಸ್ಟ್ ಅಸ್ತಿತ್ವಕ್ಕೆ ಬಂತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಚಕರು ನ್ಯಾಯಾಲಯ ಮೊರೆ ಹೋದರು. ಈ ವಿವಾದ ಬಗೆಹರಿಯುವರೆಗೂ ದೇವಾಲಯ ತೆರೆಯಬಾರದು ಎಂಬುದು ನಮ್ಮ ನಿಲುವು. ಶಾಸಕರು ಮಧ್ಯೆ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು.ದೊಡ್ಡಬಸವೇಗೌಡ, ಸಪ್ತ ದೇವಾಲಯಗಳ ಟ್ರಸ್ಟ್‌ನ ಖಜಾಂಚಿ