ಕೋಲಾರ ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಕಾನೂನು ಕಾರ್ಯಾಗಾರವನ್ನು ಆಡಳಿತಾತ್ಮಕ ನ್ಯಾಯಮೂರ್ತಿ ಮಹಮದ್ ನವಾಜ್ ಉದ್ಘಾಟಿಸಿದರು. ಬಿ.ವಿ.ಶ್ರೀನಿವಾಸ್, ಜಿ.ಎ.ಮಂಜುನಾಥ್ ಇದ್ದರು. 
ನ್ಯೂಸ್

ನೂತನ ಕಾಯಿದೆಗಳ ಜಾಗೃತಿ ಮೂಡಿಸಿ

ಕೋಲಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸದಾಗಿ ಜಾರಿಯಾಗಿರುವ ಕಾಯಿದೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಮಹಮದ್ ನವಾಜ್ ಹೇಳಿದರು.

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ಲಾ ಅಕಾಡೆಮಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಕಾಲಮಾನಕ್ಕೆ ಅನುಗುಣವಾಗಿ ಪರಿಷ್ಕರಣೆಗೊಂಡಿರುವ ಕಾಯಿದೆಗಳನ್ನು ವಕೀಲರು ಜನಸಾಮಾನ್ಯರಿಗೆ ತಿಳಿಸಬೇಕು ಎಂದರು.

ಮೆಕಾಲೆ ಕಾಲಮಾನದಿಂದಲೂ ಚಾಲನೆಯಲ್ಲಿದ್ದ ಕಾಯಿದೆಗಳು ವ್ಯವಸ್ಥೆಯ ಕಾಲಘಟ್ಟಕ್ಕೆ ಅನುಗುಣವಾಗಿ ಪರಿಷ್ಕರಣೆಯಾಗುತ್ತಿವೆ. ಆದರೂ ಸಹ ಭಾರತೀಯ ಕಾಯಿದೆಗಳು ಕಳೆದ ಸುಮಾರು ವರ್ಷ ಕಾಲದಿಂದ ಆಧುನಿಕ ಸಮಾಜಕ್ಕೆ ಅನುಗುಣ ಬದಲಾವಣೆ ಕಂಡಿರಲಿಲ್ಲ. ಆದರೀಗ ಬಿಎನ್‌ಎಸ್, ಬಿಎನ್‌ಎಸ್‌ಎಸ್ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮವು ಆಧುನಿಕ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮಟ್ಟದಲ್ಲಿ ಪರಿಷ್ಕರಣೆಗೊಂಡು ಜಾರಿಗೆ ಬಂದಿದೆ ಎಂದು ತಿಳಿಸಿದರು.

ಅದರೂ ಸಹ ಐಪಿಸಿ, ಸಿಆರ್‌ಪಿಸಿ ಕಾಯಿದೆಯನ್ನೇ ಬಳಸುತ್ತಿರುವುದು ವಿಷಾದಕರ ಸಂಗತಿ. ಆದರೆ ನೂತನ ಕಾಯ್ದೆಗಳ ಅನುಷ್ಠಾನವಾದ ನಂತರ ತಾಂತ್ರಿಕವಾಗಿ ನಾವೂ ನ್ಯಾಯ ಅಭ್ಯಾಸದಲ್ಲಿ ಅನ್ವಯಿಸಿಕೊಳ್ಳುವುದು ಸೂಕ್ತ. ಆದರೆ ಈ ಮೊದಲು ದಾಖಲಿಸಿರುವ ಪ್ರಕರಣಗಳಲ್ಲಿ ನೂತನ ಕಾಯಿದೆ, ಕಲಂಗಳನ್ನು ಬಳಸದಿದ್ದರೂ ತಿರಸ್ಕರಿಸದೇ, ವಜಾಗೊಳಿಸದೇ ಇತ್ಯರ್ಥಪಡಿಸುವ ಪ್ರಯತ್ನವಾಗುತ್ತಿದೆ ಎಂದರು.

ನ್ಯಾಯಿಕ ವ್ಯವಸ್ಥೆ ಬಲಗೊಳ್ಳಲು, ಇನ್ನಷ್ಟು ಪರಿಣಾಮಕಾರಿಗೊಳ್ಳಲು ವಕೀಲರಿಗೆ ಕಾರ್ಯಾಗಾರಗಳು ಅನಿವಾರ್ಯವಾಗಿವೆ. ಇದರಿಂದ ವ್ಯವಸ್ಥೆ ಇನ್ನಷ್ಟು ಉತ್ತಮೀಕರಣಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ವಿ.ಶ್ರೀನಿವಾಸ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಖಜಾಂಚಿ ನವೀನ್ ಹಾಜರಿದ್ದರು.