ಚಂದ್ರಶ್ರೀ ಸತ್ಸಂಗ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಅಕ್ಷಯಾ ಗೋಖಲೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ, ಡಾ. ಚಿತ್ರಾ ಶ್ರೀನಿವಾಸ್, ಸೂರ್ಯನಾರಾಯಣ್ ಇತರರಿದ್ದರು.  
ನ್ಯೂಸ್

ಮಕ್ಕಳಲ್ಲಿ ಸಂಸ್ಕಾರದ ಅರಿವು ಮೂಡಿಸಿ

ಶಿವಮೊಗ್ಗ: ಬೇರೆ ದೇಶಗಳಿಗಿಂತ ಭಾರತೀಯ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚಾರ, ವಿಚಾರಗಳು ವಿಶಿಷ್ಟವಾಗಿವೆ. ಮಕ್ಕಳಿಗೂ ಕಲಿಸಿ, ಪರಿಪಾಲಿಸುವುದರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಹೇಳಿದರು.

ಶಾರದಾದೇವಿ ಸತ್ಸಂಗ ಕೇಂದ್ರದಿಂದ ವಿನೋಬನಗರ ಚಂದ್ರಶ್ರೀ ಸತ್ಸಂಗ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ 20ನೇ ವಾರ್ಷಿಕೋತ್ಸವದಲ್ಲಿ ಪ್ರಾಚೀನ ಮತ್ತು ಆಧುನಿಕ ಸ್ತ್ರೀಯರ ಪರಮಾದರ್ಶ ಶಾರದಾ ದೇವಿ ವಿಷಯ ಕುರಿತು ಉಪನ್ಯಾಸ ನೀಡಿದರು.

ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿ ಪಾತ್ರ ಪ್ರಮುಖ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಗತ್ಯ ಧ್ಯೇಯಗಳನ್ನು ಆಕೆ ತನ್ನ ಕುಟುಂಬಕ್ಕೆ ನೀಡುತ್ತಾಳೆ. ಶಾರದಾ ದೇವಿ ಸಮಾಜದ ಎಲ್ಲರನ್ನೂ ತನ್ನ ಮಕ್ಕಳೆಂದು ಪರಿಭಾವಿಸಿದ್ದರು. ಇಂದಿನ ಪೀಳಿಗೆಗೆ ಮಾತೆ ಶಾರದಾ ದೇವಿ ಅವರ ಬದುಕು, ತತ್ವ, ಸಂದೇಶ ಮತ್ತು ಆದರ್ಶಗಳು ದಾರಿದೀಪ ಎಂದು ತಿಳಿಸಿದರು.

ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಶಾರದಾ ದೇವಿ ಅವರ ಜೀವನ ಎಲ್ಲರಿಗೂ ಪ್ರೇರಣೆ. ಶಾರದಾದೇವಿ ಅವರ ಜೀವನಗಂಗಾ ಪುಸ್ತಕವನ್ನು 48 ದಿನ ಶ್ರದ್ಧೆ-ಭಕ್ತಿಯಿಂದ ಪಠಣ ಮಾಡಿದವರ ಬದುಕಿನಲ್ಲಿ ಪವಾಡ ಸದೃಶ್ಯ ರೀತಿ ಬದಲಾವಣೆ ಕಂಡುಬಂದಿದೆ ಎಂದು ತಿಳಿಸಿದರು.

ಅಕ್ಷಯಾ ಗೋಖಲೆ, ಪ್ರಸೂತಿ ತಜ್ಞೆ ಡಾ. ಚಿತ್ರಾ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಅಡಕೆ ವರ್ತಕ ಸೂರ್ಯನಾರಾಯಣ್, ನಮಿತಾ ಸೂರ್ಯನಾರಾಯಣ್, ಡಾ. ಆಕಾಶ್, ಗೀತಾ ಮಹಾಬಲ ರಾವ್, ಡಾ. ಪೂಜಾ ಆಕಾಶ್ ಉಪಸ್ಥಿತರಿದ್ದರು.