ಎನ್.ಆರ್.ಪುರ: ತಾಯಿ ಎದೆ ಹಾಲನ್ನು ಸೇವನೆಯಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ತಾಲೂಕು ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದ ವೈದ್ಯ ಡಾ.ಸುನೀಲ್ ಹೇಳಿದರು.
ಸೋಮವಾರ ಶೆಟ್ಟಿಕೊಪ್ಪದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ವಿಶ್ವದಲ್ಲಿ ತಲಾ 3 ಮಕ್ಕಳಲ್ಲಿ ಒಂದು ಮಗು ತಾಯಿ ಎದೆ ಹಾಲಿನಿಂದ ವಂಚಿತವಾಗುತ್ತಿದೆ. ವಿಶ್ವ ಸಂಸ್ಥೆ 1991ರಲ್ಲಿ ಎದೆ ಹಾಲಿನ ಮಹತ್ವವನ್ನು ವಿಶ್ವಕ್ಕೆ ಅರಿವು ಮೂಡಿಸಲು ವಿಶ್ವ ಸ್ತನ್ಯಪಾನ ಕಾರ್ಯಕ್ರಮ ಪ್ರಾರಂಭಿಸಿತು. ಇಂದು ಪ್ರತಿ ಗ್ರಾಮ ಮಟ್ಟದಲ್ಲೂ ಗರ್ಭಿಣಿ, ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಆರೋಗ್ಯ ನಿರೀಕ್ಷಿಣಾಧಿಕಾರಿ ದರ್ಶನ್ ಮಾತನಾಡಿ, ತಾಯಿ ಮಗುವಿಗೆ ಎದೆ ಹಾಲನ್ನು ನೀಡುವುದರಿಂದ ಗರ್ಭ ಕೋಶದ ಕ್ಯಾನ್ಸರ್, ಎದೆ ಕ್ಯಾನ್ಸರ್ ಬರುವುದಿಲ್ಲ. ಮಗುವಿಗೆ ಹಾಲು ಕುಡಿಸಿದ ಮೇಲೆ ಕಡ್ಡಾಯವಾಗಿ ತೇಗಿಸಬೇಕು ಎಂದು ಸಲಹೆ ನೀಡಿದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ತಾಯಿ ಎದೆ ಹಾಲು ಅಮೃತಕ್ಕೆ ಸಮಾನ. ಯಾವ ಮಗುವೂ ಎದೆ ಹಾಲಿನಿಂದ ವಂಚಿತರಾಗಬಾರದು.ಎಲ್ಲ ತಾಯಂದಿರು ತಮ್ಮ ಜವಬ್ದಾರಿ ಅರಿತು ಮಗುವಿಗೆ ಎದೆ ಹಾಲು ನೀಡಬೇಕು ಎಂದು ಸಲಹೆ ನೀಡಿದರು. ಸಿಡಿಪಿಒ ಇಲಾಖೆ ಮೇಲ್ವೀಚಾರಕಿ ಕಾವ್ಯಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ರಾಸ್ ಐ ಕಾಯಿಲೆ ಕುರಿತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್ ಮಾಹಿತಿ ನೀಡಿದರು. ಕ್ಷಯ ರೋಗ ಕುರಿತು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್‌ಕರ್ ಮಾಹಿತಿ ನೀಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯ ಡಾ.ಡಿ.ಆರ್.ಶ್ವೇತಾ, ಡಾ.ಡಿ.ಆರ್.ಪೂರ್ವಿಕ, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಕಾವ್ಯ, ಮುಖ್ಯಶಿಕ್ಷಕಿ ಪುಟ್ಟಮ್ಮ, ಬರ್ಕ್‌ಮನ್ಸ್ ಪ್ರೌಢ ಶಾಲೆ ಶಿಕ್ಷಕಿ ನಾಸೀರಾ, ಜಯಂತಿ, ಸಬಿನಾ, ಗಾಯತ್ರಿ ಉಪಸ್ಥಿತರಿದ್ದರು.