ಸೊರಬ: ಬೀದಿಬದಿ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಪುರಸಭೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮುದ್ರಾ ಯೋಜನೆಯಡಿ 10 ಸಾವಿರ ರೂ. ಸಾಲ ನೀಡುವ ಉದ್ದೇಶ ಹೊಂದಲಾಗಿದೆ. ಅವರ ಕುಟುಂಬಸ್ಥರಿಗೆ ಸಾಮಾಜಿಕ ಭದ್ರತೆ ನೀಡುತ್ತಿದ್ದು, ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಸುಹಾಸ್ ಮಾತನಾಡಿ, ವ್ಯಾಪಾರಿಗಳಲ್ಲಿ ವ್ಯವಹಾರ ಕೌಶಲ ಹೆಚ್ಚಿರುತ್ತದೆ. ಆದರೂ ವಿವಿಧ ಸಂದರ್ಭಗಳಲಿ ಹಣಕಾಸು ಸಮಸ್ಯೆ ಎದುರಾಗುತ್ತದೆ. ವ್ಯಾಪಾರಿಗಳು ದುಡಿಮೆಯ ಸ್ವಲ್ಪ ಹಣವನ್ನು ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬ್ಯಾಂಕ್ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು ಎಂದರು.
ಸವಣೂರು ತಾಲೂಕು ಹುರಳಿಕುಪ್ಪಿಯ ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಬೀದಿ ನಾಟಕ ಮೂಲಕ ಸರ್ಕಾರದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಸದಸ್ಯರಾದ ಆಫ್ರೀನಾ ಮೆಹಬೂಬ್ ಬಾಷಾ, ಜಯಲಕ್ಷ್ಮೀ, ಶರಾವತಿ ಪ್ರದೇಶ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾರದಮ್ಮ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಕ ಶಬ್ಬೀರ್ ಖಾನ್, ಆಪ್ತ ಸಮಾಲೋಚಕ ಬಸವರಾಜ್, ಮೇಘರಾಜ್, ಪುರಸಭೆ ಸಮುದಾಯ ಸಂಘಟಕ ಲಕ್ಷ್ಮೀನಾರಾಯಣ್ ಇದ್ದರು.