ಕೋಲಾರದ ಕಿಸಾನ್​ ಸಂ ಕಚೇರಿಯಲ್ಲಿ ಮಂಗಳವಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಪ್ಪಾಜಿಗೌಡ, ಸುಬ್ರಹ್ಮಣಿ, ಶ್ರೀನಿವಾಸಗೌಡ, ಕೃಷ್ಣಮೂರ್ತಿ ಇದ್ದರು. 
ನ್ಯೂಸ್

ಪರಿಹಾರ ಕಂಡುಕೊಳ್ಳಲು ಹೋರಾಟ ರೂಪಿಸಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಅನ್ನದಾತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕು ಎಂದು ಕಿಸಾನ್​ ಸಂಘದ ದಕ್ಷಿಣ ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಣಜೇನಹಳ್ಳಿ ಕೆ.ಎನ್​. ನಾರಾಯಣಸ್ವಾಮಿ ಹೇಳಿದರು.

ನಗರದ ಕಿಸಾನ್​ ಸಂಘದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿ, ಸಂಘವು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಿಕೊಂಡು ಬಂದಿದೆ. ಸಂದ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಮುಂದಾಗಬೇಕು ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜಿಲ್ಲಾ ತಾಲೂಕು ಮತ್ತು ಗ್ರಾಮದ ಹಂತದ ಸಾವಯವ ಕೃಷಿ, ಗೋವು ಸಂರಕ್ಷಣೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ವಿಷಮುಕ್ತ ಆಹಾರ ಉತ್ಪಾದನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಕನಿಷ್ಠ ತಮ್ಮ ಕುಟುಂಬಕ್ಕಾಗುವಷ್ಟು ಬೆಳೆಯುವುದನ್ನಾದರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ದೇಶದ ಜನರ ಆರೋಗ್ಯ ಕಾಪಾಡಬೇಕಾಗಿದೆ ಎಂಬ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಜ್ಞಾನಿಕವಾಗಿ ಲಾಭದಾಯಕ ಬೆಲೆ ನೀಡಬೇಕೆಂಬ ಹಕ್ಕೋತ್ತಾಯ ನಿರಂತರವಾಗಿದೆ ಎಂದರು.

ನೂತನ ಪದಾಧಿಕಾರಿಗಳ ನೇಮಕ: ಭಾರತೀಯ ಕಿಸಾನ್​ ಸಂಘದ ಕೋಲಾರ ತಾಲೂಕು ಅಧ್ಯಕ್ಷರಾಗಿ ನಡುಪಳ್ಳಿ ಎನ್​.ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಚದುಮನಹಳ್ಳಿ ಎನ್​.ಈಶ್ವರಪ್ಪ, ಕಾರ್ಯದರ್ಶಿಯಾಗಿ ಜಿ.ಗಂಗಾಧರ್​, ಸಹ ಕಾರ್ಯದರ್ಶಿಯಾಗಿ ನಾರಾಯಣಸ್ವಾಮಿ, ಖಜಾಂಚಿ ಎನ್​.ಎಲ್​.ಸೋಮಣ್ಣ, ಯುವ ಪ್ರಮುಖ್​ ಸಿ.ಹನುಮೇಗೌಡ, ವಿದ್ಯುತ್​ ಕ್ಷೇತ್ರದ ಪ್ರಮುಖ್​ ಆಗಿ ಹೊಸಮಟ್ನಹಳ್ಳಿ ಎಚ್​.ಆರ್​.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಚದುಮನಹಳ್ಳಿ ಈ.ಸುಬ್ರಹ್ಮಣಿ, ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಕೆ.ಜಿ.ಶ್ರೀನಿವಾಸಗೌಡ, ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಉಗಣಿ ಆರ್​.ನಾರಾಯಣಗೌಡ, ಸದಸ್ಯರಾದ ಸುಪ್ರೀಂ ವಕೀಲ ಕೋಲಾರದ ಪ್ರಜ್ವಲ್​, ಶಿವನಾರಹಳ್ಳಿ ನಾರಾಯಣಸ್ವಾಮಿ ಇದ್ದರು.