ನ್ಯೂಸ್

ಅಮಿತ್ ಶಾ ಒಂಥರಾ ರೌಡಿ ಇದ್ದಂಗೆ, ನಾನೇ ಸಿಎಂ ಆದ್ರೂ ಆದೆ: ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ ಸಿಪಿವೈ ಹೇಳಿಕೆ

arunakunigal

ಬೆಂಗಳೂರು: 'ಅಮಿತ್ ಶಾ ಒಂಥರಾ ರೌಡಿ ರೀತಿ. ನಾನೇ ಸಿಎಂ ಆದರೂ ಆದೆ...' ಎಂದು ಎಂಎಲ್ಸಿ ಸಿ.ಪಿ.ಯೋಗೇಶ್ವರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಬಿಜೆಪಿಯ ಚಾಣಾಕ್ಷ ಅಮಿತ್​ ಶಾ ಅವರನ್ನ ರೌಡಿ ಎಂದಿರುವ ಮಾತು ಸ್ವಪಕ್ಷಕ್ಕೆ ಭಾರೀ ಮುಜುಗರ ತರಿಸಿದೆ. ಸಿಎಂ ಖುರ್ಚಿ ಮೇಲೆ ಯೋಗೇಶ್ವರ್​ ಕಣ್ಣಿಟ್ಟಿದ್ದಾರೆ ಎಂಬುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಆಪರೇಷನ್​ ಕಮಲಕ್ಕೆ ಜೆಡಿಎಸ್-ಕಾಂಗ್ರೆಸ್​ ಮೈತ್ರಿ ಸರ್ಕಾರ ಬಲಿಯಾಗಿತ್ತು. ಆಡಳಿತಾರೂಢ ಬಿಜೆಪಿ ಪಕ್ಷವು ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್​, ಜೆಡಿಎಸ್​ ಪಕ್ಷವೂ ಶತಾಯಗತಾಯ ಗೆಲ್ಲಲೇಬೇಕೆಂದು ಕಾಲಿಗೆ ಚಕ್ರಕಟ್ಟಿಕೊಂಡಂತೆ ಪ್ರತಿ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಮೆಗಾ ಯೋಜನೆಯೊಂದಿಗೆ ಖುದ್ದು ಅಮಿತ್​ ಶಾ ಅವರೇ ಇತ್ತೀಚಿಗೆ ಆಗಮಿಸಿದ್ದರು. ಆದರೆ, ವೈರಲ್​ ಆದ ಆಡಿಯೋದಲ್ಲಿ 'ಅಮಿತಾ ಶಾರನ್ನು ರೌಡಿ ಇದ್ದಂಗೆ. ಚುನಾವಣೆ ಬಳಿಕ ಜನಾಭಿಪ್ರಾಯದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ಆದರೆ ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚನೆ ಮಾಡ್ತೀವಿ'. ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

'ಮಾವಿನ ಹಣ್ಣನ್ನು ಮರದಲ್ಲೇ ಹಣ್ಣು ಮಾಡೋಕು, ಮರದಿಂದ ಕಿತ್ತು ತಂದು ಕೆಮಿಕಲ್ ಹಾಕಿ ಹಣ್ಣು ಮಾಡೋಕು ವ್ಯತ್ಯಾಸ ಇದೆ. ನಾವು ಎರಡಕ್ಕೂ ರೆಡಿ ಇದ್ದೀವಿ. ಎಲೆಕ್ಷನ್ ಬಳಿಕ ಆಪರೇಷನ್ ಕಮಲ ಮಾಡೋದಿಲ್ಲ, ಎಲೆಕ್ಷನ್‌ಗೂ ಮೊದಲೇ ಆಪರೇಷನ್ ಕಮಲ ಮಾಡ್ತೀವಿ. ಹೊಂದಾಣಿಕೆ ರಾಜಕೀಯ ಬೇಡ ಅಂತ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಒಂಥರಾ ರೌಡಿಸಂ ಕಣಯ್ಯ. ಪಾರ್ಟಿ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ಕಥೆ ಅಷ್ಟೆ' ಎಂದು ಆಡಿಯೋದಲ್ಲಿ ಇದೆ.