ನ್ಯೂಸ್

ಮೈಸೂರಿನತ್ತ ಯೋಗೇಶ್ವರ್ ಚಿತ್ತ : ಪಕ್ಷ ಸಂಘಟನೆಗೆ ಮುಂದಾದ ಸಿಪಿವೈ ರಾಮನಗರಕ್ಕೆ ಬರುವಂತೆ ಕಾರ್ಯಕರ್ತರ ಒತ್ತಾಯ

Ramanagara

ರಾಮನಗರ : ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ ಹೆಸರು ಸಿ.ಪಿ.ಯೋಗೇಶ್ವರ್. ಕಳೆದ ವಿಧಾನಸಭೆ ಚುನಾವಣೆಯಿಂದ ಆರಂಭಗೊಂಡು ಇತ್ತೀಚೆಗೆ ಮಂತ್ರಿ ಸ್ಥಾನ ಪಡೆಯುವವರೆಗೂ ಒಂದಲ್ಲ ಒಂದು ವಿಚಾರದಲ್ಲಿ ಸಿಪಿವೈ ಹೆಸರು ತಳಕು ಹಾಕಿಕೊಳ್ಳುತ್ತಲೇ ಇದೆ. ಇದೀಗ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆ ವಿಚಾರದಲ್ಲೂ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಪ್ರಮುಖವಾಗಿ ಮೈಸೂರನ್ನು ಕೇಂದ್ರೀ ಕರಿಸಿಕೊಂಡು ಸಿಪಿವೈ ರಾಜಕಾರಣ ಮಾಡುತ್ತಿರು ವುದು ಚರ್ಚೆಗೆ ಕಾರಣವಾಗಿದೆ.

ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಮೈಸೂರು ರಾಜಕಾರಣಕ್ಕೆ ಎಂಟ್ರಿ ಪಡೆಯುವ ತವಕದಲ್ಲಿದ್ದ ಸಿಪಿವೈಗೆ ಪಕ್ಷದ ನಿರ್ಧಾರ ಹಿನ್ನಡೆ ಉಂಟು ಮಾಡಿತ್ತು. ಇದಾದ ನಂತರ ಅವಕಾಶ ಸಿಕ್ಕಾಗಲೆಲ್ಲಾ ಮೈಸೂರು ಭಾಗದಲ್ಲಿ ತಮ್ಮ ಛಾಪು ಮೂಡಿಸಲು ಸಿಪಿವೈ ಯತ್ನ ನಡೆಸುತ್ತಲೇ ಇದ್ದರು. ಆದರೆ ಇದೀಗ ಪ್ರವಾಸೋದ್ಯಮ ಸಚಿವರಾದ ನಂತರ ಮತ್ತೆ ಪಕ್ಷ ಸಂಘಟನೆ ಕಾರ್ಯವನ್ನು ಚುರುಕುಗೊಳಿಸಿರುವ ಯೋಗೇಶ್ವರ್ ಕಳೆದ ಕೆಲವು ದಿನಗಳಿಂದೀಚಿಗೆ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ನಾಲ್ಕು ಬಾರಿ ಮೈಸೂರಿಗೆ ಭೇಟಿ ನೀಡಿದ್ದಾರೆ.

ಮೈಸೂರು ಉಸ್ತುವಾರಿ?: ಸಿಪಿವೈ ಅವರು ಮೈಸೂರು ಭಾಗದಲ್ಲಿ ತಾವೊಬ್ಬ ಪ್ರಬಲ ಸಂಘಟನಾಕಾರ ಎನ್ನುವುದನ್ನು ಸಾಬೀತುಪಡಿಸಲು ಹಲವಾರು ಬಾರಿ ಯತ್ನಿಸುತ್ತಲೇ ಇದ್ದಾರೆ. ಈ ಬಾರಿ ಸಂಪುಟ ಪುನರಾಚನೆ ವೇಳೆ ಜಿಲ್ಲಾ ಉಸ್ತುವಾರಿಗಳು ಬದಲಾಗುತ್ತಾರೆೆ ಎನ್ನುವ ಲೆಕ್ಕಾಚಾರವೂ ಇತ್ತು. ಈ ಬದಲಾವಣೆಯಲ್ಲಿ ಯೋಗೇಶ್ವರ್‌ಗೆ ರಾಮನಗರ ಜಿಲ್ಲೆಯ ಉಸ್ತುವಾರಿಯನ್ನೂ ನೀಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಸ್ತುವಾರಿ ಬದಲಾವಣೆಯನ್ನೂ ಮಾಡದೇ, ಯಾವುದೇ ಉಸ್ತುವಾರಿಯನ್ನೂ ನೀಡದೆ, ಕೇವಲ ಧ್ವಜಾರೋಹಣ ಮಾಡಲು ಕೋಲಾರ ಜಿಲ್ಲೆಗೆ ನೇಮಕ ಮಾಡಿದ್ದರು.

ಆದರೆ, ಪಟ್ಟು ಬಿಟದ ಯೋಗೇಶ್ವರ್ ಇದೀಗ ಮೈಸೂರು ಜಿಲ್ಲೆಯ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿಯೇ ಅಲ್ಲಿಗೆ ಪದೇಪದೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರ ಬಿಡಲ್ಲ :  ರಾಮನಗರ ಜಿಲ್ಲೆಯ ರಾಜಕಾರಣದ ಕಡೆಗೆ ಹೆಚ್ಚು ಒಲವು ತೋರದೇ ಇರುವುದರಿಂದ ಯೋಗೇಶ್ವರ್ ಮುಂದಿನ ಚುನಾವಣೆಯಲ್ಲಿ ಮೈಸೂರಿನ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಗಾಳಿ ಸುದ್ದಿಯೂ ಹರಿದಾಡಿತ್ತು. ಇದು ಅವರ ಬೆಂಬಲಿಗರು ವಿಚಲಿತರಾಗುವಂತೆ ಮಾಡಿತ್ತು. ಆದರೆ, ಈ ಸುದ್ದಿಯನ್ನು ನಿರಾಕರಿಸಿದ್ದ ಸಿಪಿವೈ, ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ತೊರೆಯುವ ಮಾತೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟ ಪಡಿಸಿದ್ದರು.

ಜಿಲ್ಲೆಯಲ್ಲಿ ಜೋರಿಲ್ಲ : ರಾಜಕೀಯ ಎದುರಾಳಿಗಳು ಇರುವ ರಾಮನಗರ ಜಿಲ್ಲೆಯಲ್ಲಿಯೇ ಪಕ್ಷ ಸಂಘಟನೆ ವಿಚಾರಕ್ಕೆ ಸಿಪಿವೈ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತವರು ಕ್ಷೇತ್ರ ಚನ್ನಪಟ್ಟಣಕ್ಕೆ ಬಂದರೂ ಜಿಲ್ಲೆಯ ಉಳಿದ ತಾಲೂಕುಗಳ ಬಗ್ಗೆ ಗಮನಹರಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಯೋಗೇಶ್ವರ್ ಆಗಮನದಿಂದ ಪಕ್ಷ ಸಂಘಟನೆಯಾಗುತ್ತದೆ ಎನ್ನುವ ಆಸೆ ಇಟ್ಟುಕೊಂಡಿದ್ದ ಸಾವಿರಾರು ಕಾರ್ಯಕರ್ತರಿಗೆ ನಿರಾಸೆ ಆದಂತಾಗಿದೆ. ಆದರೆ, ಜಿಲ್ಲೆಯ ಕಾರ್ಯಕರ್ತರು ಯೋಗೇಶ್ವರ್ ಅವರು ಪಕ್ಷವನ್ನು ಜಿಲ್ಲೆಯಲ್ಲಿಯೂ ಸಂಘಟನೆ ಮಾಡುತ್ತಾರೆ ಎನ್ನುವ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಮೈಸೂರಿಗೆ ನೀಡುತ್ತಿರುವ ಮಹತ್ವವನ್ನೂ ಜಿಲ್ಲೆಗೂ ಕೊಡಬೇಕು ಎನ್ನುವ ಬೇಡಿಕೆ ಕಾರ್ಯಕರ್ತರದಾಗಿದೆ. ಇದಕ್ಕೆ ಪೂರಕವಾಗಿ ಯೋಗೇಶ್ವರ್ ಸ್ಪಂದಿಸುವರೇ ಕಾದು ನೋಡಬೇಕಿದೆ.

-