ನ್ಯೂಸ್

ಬಿಜೆಪಿ ಬಿಟ್ಟು ಸಿಪಿವೈ ಅವಕಾಶವಾದಿಯಾದರು!

ಮುಳಬಾಗಿಲು: ಸಿ.ಪಿ.ಯೋಗೇಶ್ವರ್​ ಅವರನ್ನು ಚನ್ನಪಟ್ಟಣದಿಂದ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದು ಬಿಜೆಪಿ ಇಂಗಿತವಾಗಿತ್ತು. ಅತುರದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗುವ ಮೂಲಕ ತಪು$್ಪ ನಿರ್ಧಾರ ತೆಗೆದುಕೊಂಡು ಅವರಿಗೆ ಅವರೇ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಆವಣಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್​

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ವಿರುದ್ಧ ಗಟ್ಟಿಯಾಗಿ ನಿಂತಿದ್ದರು. ಬಿಜೆಪಿ ಅಭ್ಯರ್ಥಿಪರ ಕೆಲಸ ಮಾಡಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಕಾಂಗ್ರೆಸ್​ಗೆ ಸಹಾಯ ಮಾಡಬೇಕು ಎಂಬ ಅಲೋಚನೆಯೂ ಅವರಲ್ಲಿ ಇರಲಿಲ್ಲ. ಅವರ ನಿರ್ಧಾರವು ಅವಕಾಶವಾದಿ ರಾಜಕಾರಣ ಎಂಬುದನ್ನು ತೋರಿಸುತ್ತಿದೆ ಎಂದು ತಿಳಿಸಿದರು.

ಸಿ.ಪಿ.ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ ವಿಚಾರ ಬೇಸರ ತಂದಿದೆ. ತಪು$್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್​ ಕಡೆ ವಾಲಿದ್ದಾರೆ ಎಂದು ಗೊತ್ತಿಲ್ಲ. ಸಮಾಧಾನವಿಲ್ಲದೆ ಪಕ್ಷ ಬಿಟ್ಟು ಹೋಗಿ ಅವಕಾಶವಾದಿ ಎಂಬುದನ್ನು ತೋರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಚನ್ನಪಟ್ಟಣ, ರಾಮನಗರದಲ್ಲಿ ಸಿ.ಪಿ.ವೈ ಬಿಜೆಪಿಯ ಮುಂಚೂಣಿ ನಾಯಕರಾಗಿದ್ದರು. ಬಿಜೆಪಿಯಲ್ಲಿ ಅವರಿಗೆ ಉತ್ತಮ ಸ್ಥಾನ ಮಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಕುಮಾರಸ್ವಾಮಿ ಅವರನ್ನು ಮನವೊಲಿಸಿ ವ್ಯತ್ಯಾಸ ಸರಿಪಡಿಸಿಕೊಳ್ಳಲು ಅವಕಾಶವಿತ್ತು. ಇದೀಗ ಅವರ ನಿರ್ಧಾರವು ಯಾವ ನಿಲುವು, ಯಾವುದನ್ನು ಬೆಂಬಲಿಸಿದಂತೆ ಆಗಿದೆ?, ಕಾಂಗ್ರೆಸ್​ ಸೇರ್ಪಡೆಯಿಂದ ಯಾವ ಸಮರ್ಥನೆ ನೀಡಲಿದ್ದಾರೆ ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.

ರಾಜ್ಯದಲ್ಲಿ ಸರ್ಕಾರ ವಿರೋಧಿ ಅಲೆ

ಕಾಂಗ್ರೆಸ್​ ವಿರುದ್ಧವಲ್ಲದೆ ಡಿ.ಕೆ.ಶಿವಕುಮಾರ್​ ವಿರುದ್ಧವೂ ಸಿಪಿವೈ ಹೋರಾಟಗಳನ್ನು ನಡೆಸಿದ್ದಾರೆ. ಅವರು ಪಕ್ಷ ಬಿಟ್ಟಾಗಿದೆ. ಈಗ ಅವರ ಬಗ್ಗೆ ಮಾತನಾಡಿದರೆ ಪೋಸ್ಟ್​ ಮಾರ್ಟಮ್​ ಮಾಡಿದಂತಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತ ವಿರೋಧಿ ಅಲೆ ಇದ್ದು, ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗ ಕಾಂಗ್ರೆಸ್​ ಬಗ್ಗೆ ಏನೂ ಹೇಳಂಗಿಲ್ಲ, ಕಾಂಗ್ರೆಸ್​ಗೆ ಅಧಿಕಾರ ನೀಡಿದ್ದಕ್ಕಾಗಿ ರಾಜ್ಯದ ಜನರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆಯಾಗಿ ಎಡವಲು ಹೋಗಿದ್ದಾರೆ. ರಾಜಕೀಯ ಬೆಳವಣಿಗೆಗಳಿಂದ ಮುಖ್ಯಮಂತ್ರಿಗಳೇ ಹತಾಶರಾಗಿದ್ದಾರೆ. ಶಾಸಕರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾರೂ ಸಹ ಸರ್ಕಾರದ ಬಗ್ಗೆ ಒಳ್ಳೆಯ ಮಾತಾಡಲ್ಲ. ಬಿಜೆಪಿಯಲ್ಲಿ ಯಾವುದೇ ರೀತಿ ಗುಂಪುಗಾರಿಕೆಯಿಲ್ಲ, ಬಂಡಾಯವೂ ಇಲ್ಲ ಎಲ್ಲರೂ ಒಟ್ಟಿಗಿದ್ದೇವೆ ಎಂದು ಅಶ್ವತ್ಥ ನಾರಾಯಣ ಹೇಳಿದರು.