ನ್ಯೂಸ್

ಭವಿಷ್ಯ ರೂಪಿಸುವವರ ಬದುಕೇ ಅತಂತ್ರ: ಸೇವಾ ಭದ್ರತೆ, ಸೌಲಭ್ಯಗಳಿಲ್ಲದೆ ಅತಿಥಿ ಉಪನ್ಯಾಸಕರ ಅಳಲು

Ramanagara

ಚನ್ನಪಟ್ಟಣ: ಸಮಾಜದ ಭವಿಷ್ಯದ ಪ್ರಜೆಗಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ನಮಗೆ ಸೇವಾ ಭದ್ರತೆ ಎಂಬುದು ಮರೀಚಿಕೆಯಾಗಿದೆ. ಕನಿಷ್ಠ ವೇತನ ಸೇರಿ ಯಾವುದೇ ಸವಲತ್ತುಗಳಿಲ್ಲದ ಆತಂಕದ ಬದುಕು ನಮ್ಮದಾಗಿದೆ. ವಯೋಮಿತಿ ಮುಗಿದಿರುವ ಕಾರಣ, ಈ ಕೆಲಸವನ್ನು ನಂಬಿ ಬೇರೆ ಕೆಲಸಕ್ಕೂ ಅರ್ಹತೆ ಕಳೆದುಕೊಂಡಿದ್ದೇವೆ. ಸರ್ಕಾರವೇ ನಮ್ಮ ಕೈಹಿಡಿಯಬೇಕು..., ಇದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಅಳಲು.

ಕಳೆದ 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿರುವ ಸಾವಿರಾರು ಮಂದಿ ಸೇವಾ ಭದ್ರತೆಯಿಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇವರ ಸೇವೆ ಹಾಗೂ ಆತಂಕವನ್ನು ಮನಗಂಡಿರುವ ಹಲವು ಸಂಟನೆಗಳು ಇವರಿಗೆ ಸಾಥ್ ನೀಡುತ್ತಿವೆ. ತರಗತಿ ಬಹಿಷ್ಕರಿಸಿ ಹೋರಾಟಕ್ಕಿಳಿದಿರುವ ಗುರುಗಳಿಗೆ ಶಿಷ್ಯರೂ ಸಾಥ್ ನೀಡುತ್ತಿದ್ದಾರೆ.

ಆತಂಕದಲ್ಲಿ ಅತಿಥಿ ಉಪನ್ಯಾಸಕರು: ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಫಿಲ್, ನೆಟ್, ಸ್ಲೆಟ್ ಪದವಿ ಜತೆಗೆ, ಪಿಎಚ್‌ಡಿ ಪದವೀಧರರಾಗಿರುವ ಇವರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಒಂದೆಡೆ ಹುದ್ದೆಗೆ ಸೇವಾ ಭದ್ರತೆ ಇಲ್ಲದಿರುವುದು, ಮತ್ತೊಂದೆಡೆ ಬೇರೆ ಹುದ್ದೆಗೆ ಹೋಗಲು ವಯೋಮಿತಿ ಮುಗಿದಿರುವ ಕಾರಣ ಇವರೆಲ್ಲರೂ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ 11 ಸಾವಿರ ರೂ. ಗೌರವಧನ ಹಾಗೂ ಪಿಎಚ್ ಡಿ ಮಾಡಿರುವವರಿಗೆ 13 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದನ್ನೂ ಕೂಡ ಸರಿಯಾದ ಸಮಯಕ್ಕೆ ನೀಡದ ಕಾರಣ ಸಂಕಷ್ಟದ ಜೀವನ ಇವರದ್ದಾಗಿದೆ. ವಾರಕ್ಕೆ 8 ತರಗತಿಗಳಲ್ಲಿ ಪಾಠ ಹೇಳಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ಇವರ ಭವಿಷ್ಯವೇ ಅತಂತ್ರವಾಗಿದೆ.

ತರಗತಿ ಬಹಿಷ್ಕಾರ: ರಾಮನಗರ ಜಿಲ್ಲೆಯಲ್ಲಿ 700 ಹಾಗೂ ತಾಲೂಕಿನಲ್ಲಿ 126 ಅತಿಥಿ ಉಪನ್ಯಾಸಕರಿದ್ದು, ಸೇವಾ ಭದ್ರತೆ ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಡಿ.10ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಹಾದಿ ತುಳಿದಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ನಮ್ಮ ಶ್ರಮ ಬಹಳಷ್ಟಿದೆ. ಆದರೆ, ನಮ್ಮ ಸೇವೆ ಪರಿಗಣಿಸುವ ಮನಸ್ಸು ಇಲ್ಲ. ನೀಡುವ ಸಂಬಳವನ್ನು ಗೌರವಯುತವಾಗಿ ನೀಡದೆ ಸತಾಯಿಸಲಾಗುತ್ತದೆ. ಜತೆಗೆ ವೃತ್ತಿ ತಾರತಮ್ಯ ವಾಡಿ ಕೆಲವೆಡೆ ನೋಯಿಸಲಾಗುತ್ತಿದೆ ಎಂದು ಆಕ್ರೋಶಗೊಂಡು, ಹೋರಾಟ ಆರಂಭಿಸಿರುವ ಇವರಿಗೆ ಹಲವು ಸಂಟನೆಗಳು ಕೈಜೋಡಿಸಿವೆ. ತಮ್ಮ ಗುರುಗಳ ಪರಿಸ್ಥಿತಿಯ ಅರಿವಿರುವ ಇವರ ಶಿಷ್ಯರು ಕೂಡ ಪರೋಕ್ಷವಾಗಿ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ. ಈಗಾಗಲೇ ತಾಲೂಕು, ಜಿಲ್ಲಾ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲೂ ಗಮನ ಸೆಳೆಯುವ ಕೆಲಸ ನಡೆದಿದೆ.

ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 14 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ವಾಡುತ್ತಿದ್ದಾರೆ. ಇವರಲ್ಲಿ ಕೆಲವರು ಪಿಎಚ್‌ಡಿ ಸಹ ಪಡೆದಿದ್ದಾರೆ. ಇಂತಹ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿ ಸೇವಾ ಭದ್ರತೆ ಒದಗಿಸಬೇಕು. ದೆಹಲಿ ಮಾದರಿಯಲ್ಲೇ ಕಾಯಂ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಸೇವಾ ಭದ್ರತೆ ಇಲ್ಲದೇ ವಾನಸಿಕ ಖಿನ್ನತೆಗೆ ಒಳಗಾಗಿ ಕೆಲವರು ಆತ್ಮಹತ್ಯೆ ವಾಡಿಕೊಳ್ಳುವ ಪ್ರಯತ್ನಗಳನ್ನೂ ಮಾಡಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರ ಕಾಯಂಗೆ ಶೀಘ್ರ ಕ್ರಮವಹಿಸಲಾಗುವುದು ಶಿವಮ್ಮ ಉಪಾಧ್ಯಕ್ಷೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಒಕ್ಕೂಟ