ಬಾಳೆಹೊನ್ನೂರು: ಮಣಿಪುರದಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಹಾಗೂ ಹರಿಯಾಣದಲ್ಲಿ ಹತ್ಯೆ ವಿರೋಧಿಸಿ ಸಿಪಿಐ ಎಂಎಲ್ ಘಟಕದ ಸದಸ್ಯರು ಪಟ್ಟಣದ ಜೇಸಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಿಪಿಐಎಂಎಲ್ ರೆಡ್‌ಸ್ಟಾರ್ ಸಂಘಟನೆ ರಾಜ್ಯ ಸಮಿತಿ ಸದಸ್ಯ ಬಿ.ಆರ್.ಸಂದೀಪ್ ಮಾತನಾಡಿ, ಮಣಿಪುರ ಆಡಳಿತ ವ್ಯವಸ್ಥೆ ಸಂಘ ಪರಿವಾರದ ಪ್ರಾಯೋಜಿತ ಗುಂಪಿನ ನಿಯಂತ್ರಣದಲ್ಲಿದೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿದ ನಂತರವೂ ಪುಂಡರ ಪಡೆ ಅಟ್ಟಹಾಸ ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರು ತಕ್ಷಣ ಲೋಕಸಭೆಯಲ್ಲಿ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಬೇಕು. ಎರಡೂ ರಾಜ್ಯಗಳ ಸರ್ಕಾರಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯ ಬಿ.ಎಸ್.ನಾಗೇಶ್ ಮಾತನಾಡಿ, ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ದಾಳಿಯ ಸೂತ್ರದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎನ್.ಆರ್.ಪುರ ತಾಲೂಕು ಸಮಿತಿ ಸದಸ್ಯ ಪುಟ್ಟಸ್ವಾಮಿ, ಸೋಮೇಶ್ ಬಾಸಾಪುರ, ರವಿ, ವರದರಾಜು, ಭಾಗ್ಯಾ ಇದ್ದರು.