ನ್ಯೂಸ್

ಸಿಪಿವೈಗೆ ಹೈ ಕಮಾಂಡ್ ಬುಲಾವ್

ಗಂಗಾಧರ ಬಿ ವಿ

- ಅಭಿಲಾಷ್ ತಿಟ್ಟಮಾರನಹಳ್ಳಿ

ಚನ್ನಪಟ್ಟಣ

ಸಮಾನ‌ ಮನಸ್ಕರ ವೇದಿಕೆಯ ಮೂಲಕ ಕ್ಷೇತ್ರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದ್ದ ಬಿಜೆಪಿ ನಾಯಕ ಸಿ‌‌.ಪಿ.ಯೋಗೇಶ್ವರ್ ಗೆ ಪಕ್ಷದ ಹೈಕಮಾಂಡ್  ಬ್ರೇಕ್ ಹಾಕಿದೆಯೇ? ಎಂಬ ಪ್ರಶ್ನೆ ಮೂಡಿದೆ.

ಆ 11 ರ ಭಾನುವಾರ ಸಮಾನ ಮನಸ್ಕರ ವೇದಿಕೆಯಡಿಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸ್ವಾಭಿಮಾನಿ ಸಮಾವೇಶ ಮುಂದೂಡಿರುವುದು ಇದಕ್ಕೆ ಕಾರಣವಾಗಿದೆ. ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಈ ಸಮಾವೇಶದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ ಎಂಬ ಮಾತುಗಳು ಕೇಳಿಬಂದಿವೆ.

ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದರು!

ಮಾಜಿ ಸಿಎಂ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ಮೈತ್ರಿ ಪಕ್ಷದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ, ಈ ಉಪಚುನಾವಣೆಯಲ್ಲಿ ತನ್ನ ಪುತ್ರನನ್ನು ಕಣಕ್ಕಿಳಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಒಲವು ಹಾಗೂ ತನಗೆ ಟಿಕೆಟ್ ಕೈ ತಪ್ಪುವ ಸೂಚನೆ ಪಡೆದ ಯೋಗೇಶ್ವರ್, ಮೈತ್ರಿ ಪಕ್ಷಗಳಿಗೆ ಕ್ಷೇತ್ರದಲ್ಲಿರುವ ತನ್ನ ಬಲ ಪ್ರದರ್ಶಿಸಿಲು ಮುಂದಾಗಿದ್ದರು. ಇದದೊಂದಿಗೆ ಎಚ್.ಡಿ‌.ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಲು ವೇದಿಕೆಯನ್ನು ಸಹ ಸಿದ್ಧಪಡಿಸಿದರು. ಸಮಾನ ಮನಸ್ಕರ ವೇದಿಕೆಯಡಿಯಲ್ಲಿ ನಮ್ಮ ಶಾಸಕ, ನಮ್ಮ ಹಕ್ಕು ಎಂದು ಪ್ರತಿಪಾದಿಸುವ ಸಲುವಾಗಿ ನಗರದಲ್ಲಿ ಬೃಹತ್ ಸಮಾವೇಶಕ್ಕೂ ತಯಾರಿ ನಡೆದಿತ್ತು.

ಭಾನುವಾರ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ನಿಗಧಿಯಾಗಿತ್ತು. ಇದಕ್ಕಾಗಿ ಈಗಾಗಲೇ ಪೂರ್ವತಯಾರಿಯೂ ಆರಂಭವಾಗಿತ್ತು‌. ಈ ಸಮಾವೇಶದ ಪೂರ್ವಭಾವಿ ಸಭೆಗೆ ಖುದ್ದು ಹೋಗಿದ್ದ ಸಿ.ಪಿ.ಯೋಗೇಶ್ವರ್ ಸಮಾವೇಶ ಯಶಸ್ವಿಗೆ ತನ್ನ ಕಾರ್ಯಕರ್ತರಿಗೆ ಕರೆಯನ್ನು ಸಹ ನೀಡಿದ್ದರು‌‌‌‌. ಇಷ್ಟೇ ಅಲ್ಲದೇ ಸಮಾವೇಶದಲ್ಲಿ ನೀವುಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಸಹ ಘೋಷಿಸಿದರು. ಸಮಾವೇಶದ ಸಂಬಂಧ ಕರಪತ್ರವನ್ನು ಸಹ ಹಂಚಲಾಗಿತ್ತು. ಆದರೆ, ಈ ಸಮಾವೇಶವನ್ನು ಇದೀಗ ಮುಂದೂಡಲಾಗಿದೆ. ಕಾರಣಾಂತರಗಳಿಂದ ಈ ಸಮಾವೇಶ ಮುಂದೂಡಲಾಗಿದೆ ಎಂಬ ಮಾಹಿತಿ ಸಮಾನ ಮನಸ್ಕರ ವೇದಿಕೆಯ ಮೂಲದಿಂದ ಲಭ್ಯವಾಗಿದೆ.

ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಪಣ ತೊಟ್ಟಿರುವ ಸಿ.ಪಿ.ಯೋಗೇಶ್ವರ್ ಈಗಾಗಲೇ ಅದಕ್ಕೆ ಬೇಕಾದ ಪೂರ್ವತಯಾರಿಯಲ್ಲೂ ತೊಡಗಿಕೊಂಡಿದ್ದರು.‌ ಟಿಕೆಟ್ ಕೈತಪ್ಪುವ ವಾಸನೆ ತಿಳಿಯುತ್ತಲ್ಲೇ ಅಲರ್ಟ್ ಆದ ಅವರು ಮೈತ್ರಿಗೆ ಸೆಡ್ಡು ಹೊಡೆಯುವ ಪ್ಲಾನ್ ರೂಪಿಸಿದ್ದರು. ಮೈತ್ರಿಗೆ ಪರ್ಯಾಯವಾದ ಆಲೋಚನೆಯನ್ನು ಸಹ ನಡೆಸಿದ್ದರು. ಅದಕ್ಕೆ ಪೂರಕವೇ  ಸಮಾನ ಮನಸ್ಕರ ವೇದಿಕೆಯ ಸಮಾವೇಶವಾಗಿತ್ತು‌. ಈ ಮಧ್ಯೆ ಯೋಗೇಶ್ವರ್ ವೇಗಕ್ಕೆ ಬಿಜೆಪಿ ನಾಯಕರು ತಾತ್ಕಾಲಿಕವಾದ ಬ್ರೇಕ್ ಹಾಕಲು ಸಫಲವಾಗಿದ್ದಾರೆ ಎನ್ನಲಾಗಿದೆ.

ಮಧ್ಯ ಪ್ರವೇಶಿಸಿರುವ ಹೈಕಮಾಂಡ್!!

ಮೈಸೂರು ಪ್ರಾಂತ್ಯದಲ್ಲಿ ಪ್ರಬಲ ಬಿಜೆಪಿ ನಾಯಕರಾಗಿರುವ ಯೋಗೇಶ್ವರ್ ರವರ ಈ ನಡೆ ಹೈಕಮಾಂಡ್ ಅಂಗಳಕ್ಕೂ ತಲುಪಿದ್ದು, ಮೈತ್ರಿಯಲ್ಲಿ ಯಾವುದೇ ಗೊಂದಲ ಮೂಡಬಾರದು ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ಈ ಸಮಾವೇಶಕ್ಕೆ ಬ್ರೇಕ್ ಹಾಕಲು ಮಧ್ಯಪ್ರವೇಶಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಮಧ್ಯೆ‌ಬದೆಹಲಿಯಿಂದ ಯೋಗೇಶ್ವರ್ ರವರಿಗೆ ಬುಲಾವ್ ಸಹ ನೀಡಲಾಗಿದ್ದು, ನಾಯಕರ ಕೋರಿಕೆ ಮೇರೆಗೆ ಯೋಗೇಶ್ವರ್ ಈ ಸಮಾವೇಶವನ್ನು ಮುಂದೂಡಿದ್ದಾರೆ. ಹೈಕಮಾಡ್ ಭೇಟಿಗಾಗಿ ಭಾನುವಾರವೇ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ‌.

ಸಾಂತ್ವನ ನೆಪದಲ್ಲಿ ಬಿಜೆಪಿ ನಾಯಕರ ಭೇಟಿ!

ಸಿ.ಪಿ.ಯೋಗೇಶ್ವರ್ ರವರ ತಂದೆ ಪುಟ್ಟಮಾದೇಗೌಡರು ಇತ್ತೀಚಿಗೆ ನಿಧನರಾಗಿದ್ದರು. ಅವರ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯಕ್ರಮ ಗುರುವಾರ ಅವರ ಸ್ವಗ್ರಾಮ ಚಕ್ಕೆರೆ ಗ್ರಾಮದಲ್ಲಿ ನಡೆಯಿತು. ಯೋಗೇಶ್ವರ್ ರವರಿಗೆ ಸಾಂತ್ವನ ಹೇಳುವ ನೆಪದಲ್ಲಿ ಈ ಕಾರ್ಯಕ್ಕೆ ಬಿಜೆಪಿ ನಾಯಕರಾದ ಆರ್. ಅಶೋಕ್, ಅರವಿಂದ್ ಬೆಲ್ಲದ್, ಡಾ. ಅಶ್ವಥ್ ನಾರಾಯಣ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ನಾಯಕರು ಭೇಟಿ ನೀಡಿದ್ದು, ಪಕ್ಷ ನಾಯಕನ ಬಂಡಾಯವನ್ನು ತಣ್ಣಿಸುವಲ್ಲಿ ಸಫಲವಾಗಿದ್ದಾರೆ ಎನ್ನಲಾಗಿದೆ.

ಕುತೂಹಲಕ್ಕೆ ಕಾರಣವಾಗಿರುವ ಮೈತ್ರಿ ಟಿಕೆಟ್?

ಕುಮಾರಸ್ವಾಮಿ ರಾಜೀನಾಮೆಯಿಂದ ನಡೆಯಲಿರುವ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಟಿಕೆಟ್ ಯಾರಿಗೆ ಎಂಬ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದ ಟಿಕೆಟ್ ಜೆಡಿಸ್ ಪಾಲೋ? ಅಥವಾ ಬಿಜೆಪಿ ಪಾಲಾಗುವುದೋ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಳ್ಳಲಿದ್ದು ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಇತರೆ ಜೆಡಿಎಸ್ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಬಿಜೆಪಿ ನಾಯಕ ಯೋಗೇಶ್ವರ್ ರವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಸುದ್ದಿಗಳು ಸಹ ಕ್ಷೇತ್ರದಲ್ಲಿ ತೇಲಾಡುತ್ತಿವೆ. ಒಟ್ಟಾರೆ, ಮೈತ್ರಿ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಹಗ್ಗಜಗ್ಗಾಟ ನಡೆಯುತ್ತಿರುವುದು ಸುಳ್ಳಲ್ಲ. ಕಾಂಗ್ರೆಸ್ ವಿರುದ್ಧ ಮೈತ್ರಿ ‌ಕಡೆಯಿಂದ ತೊಡೆತಟ್ಟುವವರು ಯಾರು ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ