ಶಿವಮೊಗ್ಗ: ದೀಪಾವಳಿಯ ಬಲಿಪಾಡ್ಯಮಿ ದಿನವಾದ ಬುಧವಾರ ಮಲೆನಾಡು ಭಾಗದಲ್ಲಿ ಗೋಪೂಜೆ ಸಂಭ್ರಮ ಮನೆ ಮಾಡಿದ್ದರೆ, ಬಯಲುಸೀಮೆ ಭಾಗದಲ್ಲಿ ಹೋರಿಗಳನ್ನು ಅಲಂಕಾರ ಮಾಡಿ ಮೆರವಣಿಗೆ ಮಾಡಲಾಯಿತು. ಎತ್ತು, ಹಸುಗಳು, ಎಮ್ಮೆಗಳ ಕೊಂಬುಗಳಿಗೆ ಕೆಮ್ಮಣ್ಣು, ಸುಣ್ಣವನ್ನು ಬಳಿದು, ಚೆಂಡು ಹೂಗಳಿಂದ ಸಿಂಗರಿಸಲಾಗಿತ್ತು.
ಎತ್ತು ಹಾಗೂ ಹಸುಗಳಿಗೆ ವಿಶೇಷ ಪೂಜೆ ನಿಮಿತ್ತ ಗ್ರಾಮೀಣ ಭಾಗದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು. ನಗರ ಹಾಗೂ ಪಟ್ಟಣ ಪ್ರದೇಶದ ಕೆಲ ಗೋಶಾಲೆಗಳಲ್ಲಿ ಸಾಮೂಹಿಕ ಗೋಪೂಜೆ ವ್ಯವಸ್ಥೆ ಮಾಡಲಾಗಿತ್ತು.
ವರ್ಷವಿಡೀ ತನ್ನನ್ನು ಹಾಗೂ ಕುಟುಂಬವನ್ನು ಪೊರೆಯುವ ದನ-ಕರುಗಳು, ಎತ್ತುಗಳಿಗೆ ಕೃಷಿಕರ ಕುಟುಂಬ ಕೃತಜ್ಞತೆ ಸಲ್ಲಿಸುವ ದಿನವೇ ಬಲಿಪಾಡ್ಯಮಿ. ಚೆಂಡು ಹೂವಿನೊಂದಿಗೆ ಪಚ್ಚೆ ತೆನೆ, ಅಡಕೆ ಸಿಂಗಾರ, ವೀಳ್ಯದೆಲೆ, ಹಣ್ಣು ಅಡಕೆ ಮುಂತಾದವುಗಳನ್ನು ಸೇರಿಸಿದ ಮಾಲೆಗಳನ್ನು ಸಿದ್ಧಪಡಿಸಿ ಗೋವುಗಳನ್ನು ಸಿಂಗರಿಸಲಾಗಿತ್ತು. ಕೆಲವರು ಮನೆಯೊಳಗೆ ಗೋವುಗಳನ್ನು ಕರೆತಂದು, ಇನ್ನೂ ಕೆಲವರು ಕೊಟ್ಟಿಗೆಯಲ್ಲಿ ಪೂಜೆ ಸಲ್ಲಿಸಿದರು.
ಹಲವೆಡೆ ಎತ್ತುಗಳಿಗೆ ಚೆಂಡು ಹೂವು ಮಾತ್ರವಲ್ಲದೆ ಇತರ ಹೂವುಗಳಿಂದ ಸಿಂಗರಿಸಿ, ನಂತರ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಅವುಗಳನ್ನು ಇನ್ನಷ್ಟು ಸುಂದರಗೊಳಿಸಲಾಗಿತ್ತು. ಸಿಂಗಾರಗೊಂಡ ಎತ್ತುಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಸುತ್ತಲೂ ಎತ್ತುಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಂತರ ಎತ್ತುಗಳೊಂದಿಗೆ ಗ್ರಾಮ ದೇವತೆಗೆ ಪೂಜೆ ಸಲ್ಲಿಸಲಾಯಿತು.
ಸಗಣಿಯಿಂದ ಕೊಟ್ಟಿಗೆ ಬಳಿದು, ಬಾಗಿಲಿಗೆ ರಂಗೋಲಿ ಹಾಕಿ, ಇಡೀ ಕೊಟ್ಟಿಗೆಯಲ್ಲಿ ಕೆಮ್ಮಣ್ಣು ಹಾಗೂ ಸುಣ್ಣದಿಂದ ಚಿತ್ರ ಬರೆಯಲಾಗಿತ್ತು. ಜಾನುವಾರುಗಳನ್ನು ಕಟ್ಟುವ ಕಂಬಗಳನ್ನೂ ಸಿಂಗರಿಸಲಾಗಿತ್ತು.
ಬಲಿಪಾಡ್ಯಮಿಯಿಂದ ಐದು ದಿನದವರೆಗೂ ಗೋವುಗಳಿಗೆ ಪ್ರತಿದಿನ ಓಕುಳಿ ಮಾಡಲಾಗುತ್ತದೆ. ಬೆಳಗ್ಗೆ ಮೇಯಲು ಹೋಗುವ ಜಾನುವಾರುಗಳು ಸಂಜೆ ಕೊಟ್ಟಿಗೆಗೆ ಪ್ರವೇಶಕ್ಕೆ ಮುನ್ನವೇ ಎಲ್ಲ ಗೋವುಗಳಿಗೂ ಓಕುಳಿ ಚಿಮುಕಿಸುತ್ತಾರೆ. ಐದು ದಿನವೂ ಒಂದೊಂದು ಬಣ್ಣದ ಓಕುಳಿ ಬಳಸುವುದು ವಿಶೇಷ.
ಗೋವರ್ಧನ ಟ್ರಸ್ಟ್‌ನಿಂದ ಶಿವಮೊಗ್ಗದ ಆರು ಕಡೆಗಳಲ್ಲಿ ಸಾರ್ವಜನಿಕರಿಗೆ ಗೋಪೂಜೆ ವ್ಯವಸ್ಥೆ ಮಾಡಲಾಗಿತ್ತು. ವಿನೋಬನಗರ ಶಿವಾಲಯ ಆವರಣದಲ್ಲಿ ಏರ್ಪಡಿಸಿದ್ದ ಗೋಪೂಜೆಯಲ್ಲಿ ಯಡೆಯೂರು ರಂಭಾಪುರಿ ಶಾಖಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ಗೋವುಗಳಿಗೆ ಪೂರ್ಣ ರಕ್ಷಣೆ, ಸಾಧು-ಸಂತರಿಗೆ ಪೂರ್ಣ ಭಕ್ತಿ, ದೇವರುಗಳಿಗೆ ಗೌರವ ಸಿಗದಿರುವುದು ನೋವಿನ ಸಂಗತಿ. ಕೋಟ್ಯಂತರ ಜನರು ಗೋವುಗಳನ್ನು ತಾಯಿಯಂತೆ ಗೌರವಿಸುತ್ತಾರೆ. ಆದರೆ ಕೆಲವರು ಹಿಂದುಗಳ ಭಾವನಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ರವೀಂದ್ರನಗರ ಗಣಪತಿ ದೇವಾಲಯ, ಶಾಂತಿನಗರ ಶನೈಶ್ಚರ ದೇವಾಲಯ, ಸ್ವಾಮಿ ವಿವೇಕಾನಂದ ಬಡಾವಣೆ ನಾಗಸುಬ್ರಹ್ಮಣ್ಯ ದೇವಸ್ಥಾನ, ಹರಿಗೆ ಪಾರ್ವತಮ್ಮ ದೇವಾಲಯ ಹಾಗೂ ವಾಸವಿ ಪಬ್ಲಿಕ್ ಶಾಲೆ ಆವರಣದಲ್ಲಿ ಗೋಪೂಜೆ ನೆರವೇರಿತು.