ಬೆಂಗಳೂರು: ಪ್ರಸಕ್ತ ಸಾಲಿನ ಏಪ್ರಿಲ್ನಲ್ಲಿ 17ನೇ ಸುತ್ತಿನ ಕಾಲುಬಾಯಿ ಲಸಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಅಷ್ಟರಲ್ಲಿ ಆನ್ಲೈನಲ್ಲೇ ಎಲ್ಲ ಜಾನುವಾರುಗಳ ದತ್ತಾಂಶ ಸಂಗ್ರಹಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಪ್ರತಿ ಜಾನುವಾರಿಗೆ ಕಿವಿಯೋಲೆ ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಪಶುಪಾಲನಾ ಇಲಾಖೆಯಿಂದ ಕಿವಿಯೋಲೆ ಅಭಿಯಾನ ಆರಂಭವಾಗಿದೆ. ಜಾನುವಾರುಗಳ ದತ್ತಾಂಶ ಸಂಗ್ರಹಣೆಗಾಗಿ 12 ಸಂಖ್ಯೆಯ ವಿಶಿಷ್ಟ ಗುರುತಿನ ಬಿಲ್ಲೆಗಳನ್ನು (ಕಿವಿಯೋಲೆ) ಹಾಕಲಾಗುತ್ತಿದ್ದು, ಜ.15ರೊಳಗೆ ‘ಇನಾಫ್’ ಆಪ್ನಲ್ಲಿ ರೈತರು ನೋಂದಾಯಿಸಿಕೊಳ್ಳುವಂತೆ ಇಲಾಖೆಯಿಂದ ಜಾಗೃತಿ ಮೂಡಿಸುತ್ತಿದೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಾನುವಾರು ಹಾಗೂ ಅದರ ಮಾಲೀಕತ್ವದ ಮಾಹಿತಿ ದಾಖಲಿಸುತ್ತಿದ್ದು, ಬಳಿಕ ಜಾನುವಾರುಗಳಿಗೆ ಸ್ಥಳದಲ್ಲೇ ಕಿವಿಯೋಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇಶದಲ್ಲಿರುವ ಪ್ರತಿ ಜಾನುವಾರು ಹಾಗೂ ಅದರ ಮಾಲೀಕತ್ವದ ಸಂಪೂರ್ಣ ವಿವರ ‘ಇನಾಫ್’ ಆಪ್ನಲ್ಲಿ ಲಭ್ಯವಾಗಲಿದೆ. ಜತೆಗೆ ಜಾನುವಾರು ತಳಿ, ವಯಸ್ಸು, ಲಸಿಕೆ ಹಾಕಿಸಿರುವ ದಿನಾಂಕ ಮತ್ತಿತರ ವಿವರವೂ ದಾಖಲಾಗಲಿದೆ.
ಕೇಂದ್ರದಿಂದಲೇ ನೇರ ಪೂರೈಕೆ: ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ಈವರೆಗೆ ಪೂರೈಕೆಯಾಗುತ್ತಿದ್ದ ಕಾಲುಬಾಯಿ ಲಸಿಕೆಯನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಪೂರೈಸುವ ಹೊಣೆ ಹೊತ್ತಿದೆ. ರಾಜ್ಯದ ಸಹಭಾಗಿತ್ವದಲ್ಲಿ ಕೆಲವೊಂದು ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ನೇರವಾಗಿ ಕೇಂದ್ರದಿಂದಲೇ ಸರಬರಾಜು ಪ್ರಕ್ರಿಯೆ ನಡೆಯಲಿದೆ. ಈ ಕಾರಣಕ್ಕಾಗಿ ಆನ್ಲೈನ್ನಲ್ಲೇ ಜಾನುವಾರುಗಳ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ. ‘ಇನಾಫ್’ನಲ್ಲಿ ದಾಖಲಾಗದ, ಕಿವಿಯೋಲೆ ಇಲ್ಲದ ಜಾನುವಾರಿಗೆ ಲಸಿಕೆ ಹಾಕದಂತೆ ಸೂಚಿಸಲಾಗಿದೆ.