ನ್ಯೂಸ್

ಕಳ್ಳ ನೋಟಿಗೂ, ಕಳ್ಳ ಸಿಗರೇಟಿಗೂ ಒಂದೇ ದಾರಿ; ಕೋವಿಡ್​ ವಿಶೇಷ ರೈಲುಗಳಲ್ಲಿ ಅಕ್ರಮ ಸಾಗಣೆ..!

ನವದೆಹಲಿ: ಕೋವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವಿಶೇಷ ರೈಲುಗಳ ಪ್ರಯಾಣಿಕರಿಗೆ ಮಾತ್ರವಲ್ಲ, ಇತರ ಉದ್ದೇಶಕ್ಕೂ ಬಳಕೆಯಾಗುತ್ತಿದೆ.

ದೆಹಲಿಯ ಅಬಕಾರಿ ಸುಂಕದ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಈ ಸತ್ಯ ಬಯಲಾಗಿದೆ. ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಿದೇಶಿ ಬ್ರಾಂಡ್​ಗಳ ಸಿಗರೇಟ್​ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದೇಶದ ವಿವಿಧ ಕಡೆಗಳಿಗೆ ಸಾಗಿಸಲಾಗುತ್ತಿದ್ದ 23.5 ಲಕ್ಷ ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 1.60 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ದೇಶದಲ್ಲಿ ಬಳಕೆಯಾಗುವ ಶೇ.25 ಸಿಗರೇಟ್​ಗಳು ಅಕ್ರಮ ವಿದೇಶಿ ಸಿಗರೇಟ್​ಗಳಾಗಿವೆ ಎಂದು ಭಾರತೀಯ ತಂಬಾಕು ಮಂಡಳಿ ವರದಿ ಹೇಳುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 13,000 ಕೋಟಿ ರೂ. ತೆರಿಗೆ ವಂಚನೆಯಾಗುತ್ತಿದೆ.

ಜುಲೈ 8ರಂದು ನಡೆದ ದಾಳಿಯಲ್ಲಿ ಪ್ಯಾರಿಸ್​ನ 4.5 ಲಕ್ಷ ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿತ್ತು. ಬಾಂಗ್ಲಾದೇಶ, ಮಯನ್ಮಾರ್​ನಿಂದ ಈ ಕಳ್ಳಸಾಗಣೆ ನಡೆಯುತ್ತಿದೆ. ವಾರಾಣಸಿಯ ಕೋವಿಡ್​ ವಿಶೇಷ ರೈಲಿನ ಮೂಲಕ ದೆಹಲಿಗೆ ತರಲಾಗಿತ್ತು. ಇನ್ನೊಂದು ವಿಶೇಷವೆಂದರೆ, ಭಾರತಕ್ಕೆ ಬರುವ ಕಳ್ಳನೋಟುಗಳಿಗೂ ಈ ದೇಶಗಳ ಗಡಿ ರಾಜಮಾರ್ಗವಾಗಿದೆ.

ಇದಾದ ಎರಡು ದಿನಗಳ ಬಳಿಕ ಕೊರಿಯಾದ ಗೋಲ್ಡ್​ ಎಸ್ಸೆ ಬ್ರ್ಯಾಂಡ್​ನ 10 ಲಕ್ಷ ಸಿಗರೇಟ್​ಗಳನ್ನು ಜಪ್ತಿ ಮಾಡಲಾಗಿತ್ತು. ಇದರ ಮೌಲ್ಯ 1.2 ಕೋಟಿ ರೂ. ಇದನ್ನು ಕೂಡ ಕೋವಿಡ್​ ವಿಶೇಷ ರೈಲಿನಲ್ಲಿ ತರಲಾಗಿತ್ತು. ಇದಲ್ಲದೇ, ಗೋಣಿಚೀಲಗಳಲ್ಲಿ 9 ಲಕ್ಷ ಸಿಗರೇಟ್​ಗಳಿದ್ದುದನ್ನು ವಶಪಡಿಸಿಕೊಳ್ಳಲಾಗಿತ್ತು.