ನ್ಯೂಸ್

ಕೋವಿಡ್ ಲಸಿಕೆ 1 ವರ್ಷ ಪರಿಣಾಮಕಾರಿ; ವ್ಯಾಕ್ಸಿನ್ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಎಂದ ತಜ್ಞರು

ಬೆಂಗಳೂರು: ಕೋವಿಡ್ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಲಸಿಕೆಗಳೇ ರಕ್ಷಕಗಳಾಗಿದ್ದು, ಮನುಷ್ಯರ ದೇಹದಲ್ಲಿ ಕನಿಷ್ಠ ಒಂದು ವರ್ಷದವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು 2-3 ವರ್ಷಗಳವರೆಗೆ ಕೋವಿಡ್​ನಿಂದ ರಕ್ಷಣೆ ಹೊಂದಿರುತ್ತಾರೆ. ಕರೊನಾಕ್ಕೆ ಕಡಿವಾಣ ಹಾಕಲು ಲಸಿಕೆ ವಿತರಣೆ ಪ್ರಕ್ರಿಯೆ ಮತ್ತಷ್ಟು ತೀವ್ರಗೊಳ್ಳಬೇಕು. ಎಲ್ಲರಿಗೂ ಬೇಗನೆ ಲಸಿಕೆ ದೊರೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಲಸಿಕೆ ದೊರೆಯುವಂತಾಗಲು ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ ಎಂಬ ಅಭಿಪ್ರಾಯಗಳಿವೆ. ‘ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಆಗುತ್ತಿಲ್ಲ. ಹಾಗಾಗಿ ಲಸಿಕೆ ಪ್ರಮಾಣ ತುರ್ತು ಹೆಚ್ಚಿಸುವ ಅಗತ್ಯವಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು’ ಎಂಬ ಆಗ್ರಹವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಿಟ್ಟಿದ್ದಾರೆ.

1.38 ಕೋಟಿ ಡೋಸ್: ಕರ್ನಾಟಕದಲ್ಲಿ ಜೂ. 1ರವರೆಗೆ 45 ವರ್ಷ ಮೇಲ್ಪಟ್ಟವರಲ್ಲಿ 20.80 ಲಕ್ಷಕ್ಕೂ ಹೆಚ್ಚು ಮಂದಿ ಎರಡೂ ಡೋಸ್ ಲಸಿಕೆಯನ್ನು ಹಾಗೂ 85 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 18-44 ವರ್ಷ ವಯೋಮಾನದವರಲ್ಲಿ 11.90 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಸೋಂಕು ಪ್ರಮಾಣ ದರ ಕಡಿಮೆ: ಸದ್ಯ ದೇಶದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮಾಹಿತಿ ಪ್ರಕಾರ ಕೋವ್ಯಾಕ್ಸಿನ್ ಮತ್ತು ಕೋವಿಡ್​ಶೀಲ್ಡ್ ಲಸಿಕೆ ವಿತರಿಸಲಾಗಿದ್ದು, ಏ. 21ರವರೆಗೆ ಕೋವ್ಯಾಕ್ಸಿನ್ ಲಸಿಕೆ ಮೊದಲ ಡೋಸ್ ಪಡೆದವರಲ್ಲಿ ಶೇ. 0.04 ಹಾಗೂ ಕೋವಿಡ್ ಶೀಲ್ಡ್ ಮೊದಲ ಡೋಸ್ ಪಡೆದವರಲ್ಲಿ ಶೇ. 0.02 ಸೋಂಕು ಪ್ರಮಾಣ ದರ ಕಂಡು ಬಂದಿದೆ. ಹಾಗೆಯೇ ಎರಡೂ ಡೋಸ್ ಲಸಿಕೆ ಪಡೆದವರಲ್ಲಿ ಕ್ರಮವಾಗಿ ಶೇ. 0.04 ಹಾಗೂ ಶೇ. 0.03ರಷ್ಟು ಸೋಂಕು ಹರಡುವಿಕೆ ವರದಿಯಾಗಿದೆ.

ಕರ್ನಾಟಕಕ್ಕೆ ಆರನೇ ಸ್ಥಾನ: ಸದ್ಯ ಕರ್ನಾಟಕ 1.38 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಜೂ.1ರವರೆಗೆ ದೇಶಾದ್ಯಂತ 21.60 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಲಾಗಿದೆ. ಕೋವಿನ್ ಡ್ಯಾಶ್​ಬೋರ್ಡ್ ಮಾಹಿತಿ ಪ್ರಕಾರ ಮಹಾರಾಷ್ಟ್ರ (2.25 ಕೋಟಿ ಡೋಸ್) ಲಸಿಕೆ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿದೆ. ಉತ್ತರ ಪ್ರದೇಶ 2ನೇ ಸ್ಥಾನ, ಗುಜ ರಾತ್ 3ನೇ, ರಾಜಸ್ಥಾನ 4ನೇ ಹಾಗೂ ಪಶ್ಚಿಮ ಬಂಗಾಳ 5ನೇ ಸ್ಥಾನದಲ್ಲಿವೆ. ಆಂಧ್ರ, ಕೇರಳ,ತಮಿಳುನಾಡು ರಾಜ್ಯಗಳು ಲಸಿಕೆ ವಿತರಣೆಯಲ್ಲಿ ಇನ್ನೂ 1 ಕೋಟಿ ತಲುಪಿಲ್ಲ.