ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗಿದ್ದು, ಸೋಮವಾರ 279ಸೋಂಕು ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆ ಲಿಸದೆ ಮೂವರು ಮೃತಪಟ್ಟಿದ್ದಾರೆ.
ಮೈಸೂರಿನ 60 ವರ್ಷದ ವ್ಯಕ್ತಿ ಹಾಗೂ 78 ವರ್ಷದ ವೃದ್ಧ ಮತ್ತು ಬೆಂಗಳೂರಿನ 78 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ. ಇದರೊಂದಿಗೆ ಡಿ.15ರಿಂದ ಈವರೆಗೂ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 6,359 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರು ನಗರದಲ್ಲಿ 134, ಮೈಸೂರು 23, ಹಾಸನ 13, ಬಳ್ಳಾರಿ 11 ಸೇರಿ ರಾಜ್ಯಾದ್ಯಂತ 279 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,222 ತಲುಪಿದೆ.
ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 1,144 ಮಂದಿ ಮನೆ ಆರೈಕೆಯಲ್ಲಿದ್ದು, 78 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 55 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ, ಇಬ್ಬರು ಆಕ್ಸಿಜನ್ ಬೆಡ್‌ನಲ್ಲಿ, 18 ಮಂದಿ ತುರ್ತು ನಿಗಾ ಘಟಕದಲ್ಲಿ ಹಾಗೂ ಮೂವರು ವೆಂಟಿಲೇಟರ್ ಸಹಿತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.