ನ್ಯೂಸ್

ಕೋವಿಡ್ ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಸುತ್ತೋಲೆ

ಬೆಂಗಳೂರು: ಕೇರಳ ಹಾಗೂ ತಮಿಳುನಾಡಿನಲ್ಲಿ ಕೋವಿಡ್ ರೂಪಾಂತರಿ ತಳಿ (ಜೆಎನ್-1) ಪತ್ತೆ ಹಿನ್ನೆಲೆಯಲ್ಲಿ ಈ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಿಡಿದ್ದು, ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದರಿಂದ ಕರ್ನಾಟಕದಲ್ಲೂ ಮುಂಜಾಗ್ರತಾ ಕ್ರಮಗಳ ಪಾಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಅನಗತ್ಯ ಆತಂಕ ಬೇಡ. ಹಾಗೆಯೇ ಗಾಬರಿಯಿಂದ ಈಗಲೇ ಕೇರಳ ಹಾಗೂ ತಮಿಳುನಾಡಿಗೆ ಹೊಂಡಿಕೊಂಡಿರುವ ಗಡಿಭಾಗದ ಜಿಲ್ಲೆಗಳಲ್ಲಿ ಸರ್ವೇಕ್ಷಣೆ ಹೆಚ್ಚಿಸುವ ಮತ್ತು ನಿರ್ಬಂಧ ಹೇರುವ ಅಗತ್ಯವಿಲ್ಲ. ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವರದಿಯಾಗುವ ಎಲ್ಲ ಸಾರಿ(ತೀವ್ರ ಉಸಿರಾಟದ ಸಮಸ್ಯೆ) ಪ್ರಕರಣಗಳನ್ನು ಹಾಗೂ ತಲಾ 20 ಐಎಲ್‌ಐ (ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ) ಪ್ರಕರಣಗಳಲ್ಲಿ ಒಂದನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ಜಿನೋಮಿಕ್ ಸಿಕ್ಷೆನ್ಸೀಸ್ ಪರೀಕ್ಷೆ: ಕೋವಿಡ್ ಲಕ್ಷಣ ಹೊಂದಿರುವ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿ ಹಾಗೂ ಗುಂಪು ಗುಂಪಾಗಿ ವರದಿಯಾಗುವ ಪ್ರಕರಣಗಳಲ್ಲಿ ಸೋಂಕಿತರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸೀಸ್ (ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ) ಪರೀಕ್ಷೆಗೆ ಕಳುಹಿಸಬೇಕು. ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿರುವವರು, ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರು, ಕೋವಿಡ್ ಮರಣ ಪ್ರಕರಣಗಳು ಹಾಗೂ ಎರಡು ಡೋಸ್ ಲಸಿಕೆ ಪಡೆದು ಕೋವಿಡ್ ಸೋಂಕಿಗೆ ಒಳಗಾದವರ ಮಾದರಿಗಳನ್ನು ಜಿನೋಮಿಕ್ ಸಿಕ್ವೆನ್ಸೀಸ್ ಪರೀಕ್ಷೆಗೆ ಒಳಪಡಿಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಟ್ಟ ಕೋವಿಡ್ ಪ್ರಕರಣಗಳಲ್ಲಿ 25ಕ್ಕಿಂತ ಕಡಿಮೆ ಸಿಟಿ ವ್ಯಾಲ್ಯೂ ಇದ್ದಲ್ಲಿ ಮಾದರಿಗಳನ್ನು ಜಿನೋಮಿಕ್ ಸಿಕ್ಷೆನ್ಸೀಸ್ ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಗೆ ಕಳುಹಿಸಬೇಕು ಎಂದು ಸೂಚಿಸಿದ್ದಾರೆ.

ಅಣಕು ಪ್ರದರ್ಶನ: ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಗಳ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಬೇಕು. ಡಿಸೆಂಬರ್ 4ನೇ ವಾರದೊಳಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಅಣಕು ಪ್ರದರ್ಶನ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.