ನ್ಯೂಸ್

ಅಮೆರಿಕದಲ್ಲಿ ಕೋವಿಡ್​ 19ನಿಂದ ಆಗಸ್ಟ್​ವರೆಗೆ ಎಷ್ಟು ಜನ ಸಾಯಬಹುದು ಗೊತ್ತೇ? ಇಟಲಿ, ಸ್ಪೇನ್​, ಬ್ರಿಟನ್​ ಸ್ಥಿತಿಗತಿಯೇನು?

ವಾಷಿಂಗ್ಟನ್: ಅಮೆರಿಕದಲ್ಲಿ ಕರೊನಾ ಪಿಡುಗು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸೋಂಕಿನಿಂದಾಗಿ ಅಲ್ಲಿ ದಿನೇದಿನೆ ಸಾಯುವವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಒಂದು ಮೂಲದ ಪ್ರಕಾರ ಆಗಸ್ಟ್ 4ರ ವೇಳೆಗೆ ಅಲ್ಲಿ ಅಂದಾಜು 60 ಸಾವಿರ ಜನ ಸಾಯುವ ಸಾಧ್ಯತೆ ಇದೆ.

ಆದರೂ, ಈ ಹಿಂದೆ ಅಂದಾಜಿಸಲಾಗಿದ್ದ 68 ಸಾವಿರ ಜನರು ಸಾಯುವ ಸಾದ್ಯತೆಗಿಂತ ಈ ಪ್ರಮಾಣ ಶೇ.12 ಕಡಿಮೆಯಾಗಿದೆ. ನಿರೀಕ್ಷೆಗಿಂತ ಉತ್ತಮವಾಗಿ ಸಾಮಾಜಿಕ ಅಂತರ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿರುವುದರಿಂದ ಮರಣ ಪ್ರಮಾಣ ಸ್ವಲ್ಪ ಇಳಿಯಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಕಳೆದ ನಾಲ್ಕು ವಾರಗಳಲ್ಲಿ ಅಮೆರಿಕದ 42 ರಾಜ್ಯಗಳಲ್ಲಿ ವಿಧಿಸಲಾಗಿರುವ ಲಾಕ್‌ಡೌನ್, ಎಲ್ಲ ಸಾರ್ವಜನಿಕ ಸ್ಥಳಗಳನ್ನು ಮುಚ್ಚಿರುವುದು ಕರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಂಶ. ಅಮೆರಿಕದಲ್ಲಿ ಈವರೆಗೆ 63 ಸಾವಿರ ಜನ ಗುಣಮುಖರಾಗಿದ್ದು, ಇನ್ನೂ 6 ಲಕ್ಷ ಸೋಂಕು ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ ಅಂದಾಜು 13 ಸಾವಿರ ಜನರ ಸ್ಥಿತಿ ಚಿಂತಾಜನಕವಾಗಿದೆ.

ಜಗತ್ತಿನಾದ್ಯಂತ ಹೆಚ್ಚಿನ ಸಾವು: ವಿಶ್ವಾದ್ಯಂತ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ1.5 ಲಕ್ಷ ದಾಟಿದೆ. ಸಾವಿನ ಸಂಖ್ಯೆ ಇನ್ನೂ ಏರುಗತಿಯಲ್ಲೇ ಇದೆ. ಜತೆಗೆ ವಿಶ್ವಾದ್ಯಂತ ಈವರೆಗೆ 22 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, ಅಮೆರಿಕವೊಂದರಲ್ಲೇ 7 ಲಕ್ಷಕ್ಕಿಂತ ಅಧಿಕ ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

ವಿಶ್ವದಾದ್ಯಂತ ವರದಿಯಾಗಿರುವ ಸೋಂಕು ಪ್ರಕರಣಗಳ ಮೂರನೇ ಒಂದು ಭಾಗ ಅಮೆರಿಕದಲ್ಲಿದೆ. ಜತೆಗೆ ಅತಿಹೆಚ್ಚು ಜನರು ಸಹ ಇಲ್ಲೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಒಂದೇ ದಿನ 2,535 ಜನರು ಅಸುನೀಗಿದ್ದು, ಒಟ್ಟು ಮೃತರ ಸಂಖ್ಯೆ 37 ಸಾವಿರ ದಾಟಿದೆ.

ಸ್ಪೇನ್, ಇಟಲಿ, ಬ್ರಿಟನ್‌ ಸ್ಥಿತಿ: ಇಟಲಿಯಲ್ಲಿ ಮೃತರ ಸಂಖ್ಯೆ 22 ಸಾವಿರ ದಾಟಿದ್ದು, 1.72 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಇಟಲಿಯಲ್ಲಿ ಪ್ರತಿದಿನ ಸರಾಸರಿ 500ರಿಂದ 600 ಜನ ಸಾಯುತ್ತಿದ್ದು, ಈ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿತ ಕಂಡು ಬಂದಿಲ್ಲ.
ಸ್ಪೇನ್‌ನಲ್ಲಿ ಮೃತರ ಸಂಖ್ಯೆ 20 ಸಾವಿರ ದಾಟಿದೆ. ಇಲ್ಲಿ ಪ್ರತಿದಿನ ನೂರಾರು ಜನ ಸಾಯುತ್ತಲೇ ಇದ್ದಾರೆ. ಫ್ರಾನ್ಸ್​ನಲ್ಲಿ ಈವರೆಗೆ 18 ಸಾವಿರ ಜನರು ಅಸುನೀಗಿದ್ದಾರೆ. ಜರ್ಮನಿಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ಕರೊನಾ ವೈರಸ್ ನಿರ್ವಹಿಸುವಲ್ಲಿ ಬ್ರಿಟನ್ ಸರ್ಕಾರ ತುಂಬಾ ನಿಧಾನವಾಗಿದೆ. ಇದರಿಂದಾಗಿ ಬ್ರಿಟನ್‌ನಲ್ಲಿ ಅಂದಾಜು 40 ಸಾವಿರ ಜನ ಸಾಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಆರಂಭಿಕ ಪರಿಸ್ಥಿತಿಯಲ್ಲಿ ಇತರ ಯುರೋಪಿಯನ್ ನಾಯಕರು ವಿಧಿಸಿದ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅಂಗೀಕರಿಸಲಿಲ್ಲ. ಇದು ಅನಾಹುತಕ್ಕೆ ದಾರಿ ಮಾಡಿಕೊಟ್ಟಿತು ಎನ್ನಲಾಗಿದೆ. ಕರೊನಾದಿಂದಾಗಿ ಅಂದಾಜು 2.5 ಲಕ್ಷ ಜನರು ಸಾಯುವ ಸಾಧ್ಯತೆ ಇದೆ ಎಂಬ ವರದಿಗಳು ಎಚ್ಚರಿಸಿದ ಮೇಲೆ ದೇಶದಲ್ಲಿ ನಿರ್ಬಂಧಗಳನ್ನು ವಿಧಿಸಿದ್ದರು.

ಬ್ರಿಟನ್‌ನಲ್ಲಿ ಈವರೆಗೆ 14 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಂದಾಜು 1.08 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಆದರೆ ಕೆಲ ವರದಿಗಳ ಪ್ರಕಾರ ಬ್ರಿಟನ್‌ನಲ್ಲಿ ಕರೊನಾ ಸಾವು-ನೋವುಗಳ ಪ್ರಮಾಣ ಇನ್ನೂ ಹೆಚ್ಚಿದೆ ಎನ್ನಲಾಗುತ್ತಿದೆ. ಅಮೆರಿಕ, ಇಟಲಿ, ಸ್ಪೇನ್ ಮತ್ತು ಫ್ರಾನ್ಸ್​ ನಂತರದಲ್ಲಿ ಬ್ರಿಟನ್‌ನಲ್ಲಿ ಅತಿಹೆಚ್ಚು ಸಾವುಗಳು ಸಂಭವಿಸಿವೆ. ಆದರೂ ಈ ಸಂಖ್ಯೆ ಕೇವಲ ಆಸ್ಪತ್ರೆಗಳಲ್ಲಿ ಮೃತಪಡುತ್ತಿರುವವರನ್ನು ಮಾತ್ರ ಒಳಗೊಂಡಿದ್ದು, ಇನ್ನು ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಹೋಮ್ ಕ್ವಾರಂಟೈನ್‌ನಲ್ಲಿ ಮೃತಪಡುತ್ತಿರುವವರನ್ನು ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.