ನ್ಯೂಸ್

ಕೋವಿಡ್ ಕಸದ ಮೇಲೆ ಕಣ್ಗಾವಲು!

| ವಿಲಾಸ ಮೇಲಗಿರಿ ಬೆಂಗಳೂರು

ಅಪಾಯಕಾರಿ ಕೋವಿಡ್-19 ಜೈವಿಕ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸ್ಥಳೀಯ ಆಡಳಿತಗಳಿಗೆ ಸೂಚಿಸಿರುವಂತೆಯೇ ಇತ್ತ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ತ್ಯಾಜ್ಯ ವಿಲೇವಾರಿ ಮೇಲ್ವಿಚಾರಣೆಗೆ ದೇಶದಲ್ಲೇ ಮೊದಲ ಬಾರಿಗೆ ಪೋರ್ಟಲ್ ಅಭಿವೃದ್ಧಿಪಡಿಸಿದೆ.

ನಿರ್ದಿಷ್ಟ ಕೋವಿಡ್ ಆಸ್ಪತ್ರೆ, ಕೋವಿಡ್ ಸೋಂಕು ಪರೀಕ್ಷಾ ಪ್ರಯೋಗಾಲಯಗಳು, ಕೋವಿಡ್ ಕ್ವಾರಂಟೈನ್ ಕೇಂದ್ರಗಳು, ಫೀವರ್ ಕ್ಲಿನಿಕ್​ಗಳಲ್ಲಿ ಉತ್ಪತ್ತಿಯಾಗುವ ಕಸದ ಮಾಹಿತಿಯನ್ನು ಈ ಪೋರ್ಟಲ್​ನಲ್ಲಿ ಕಾಣಬಹುದಾಗಿದೆ. ಕೋವಿಡ್ ಕಸ ಎಷ್ಟು ಉತ್ಪತ್ತಿಯಾಯಿತು? ಎಷ್ಟು ಎತ್ತುವಳಿ ಮಾಡಲಾಗಿದೆ? ಯಾವ ಸಂಸ್ಕರಣೆ, ವಿಲೇವಾರಿ ಘಟಕಕ್ಕೆ ತಲುಪಿದೆ? ಸ್ವೀಕರಿಸಿದಾಗ ಎಷ್ಟು ಪ್ರಮಾಣದಲ್ಲಿತ್ತು, ವಿಲೇವಾರಿ ಮಾಡುವಾಗ ಎಷ್ಟಿದೆ? ಎಂಬ ಮಾಹಿತಿಯನ್ನು ಪೋರ್ಟಲ್​ಗೆ ಅಳವಡಿಸಲಾಗುತ್ತದೆ.

ಲಾಗಿನ್ ಐಡಿಯಿಂದ ಪರಿವೀಕ್ಷಣೆ: ನಗರಾಭಿವೃದ್ಧಿ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಂಬಂಧಿತ ಅಧಿಕಾರಿಗಳು ಲಾಗಿನ್ ಐಡಿ ಮೂಲಕ ವಿಲೇವಾರಿ ಸ್ಥಿತಿ-ಗತಿಯನ್ನು ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 26 ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕಗಳಿದ್ದು, ಎಲ್ಲೆಲ್ಲಿ ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮತ್ತು ವರದಿಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಈ ಪೋರ್ಟಲ್ ಬಳಕೆಯಾಗುತ್ತಿದೆ.

24 ಗಂಟೆ ಒಳಗೆ ದಹನ: ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು 48 ಗಂಟೆವರೆಗೆ ಇಡಲು ಅವಕಾಶವಿದೆ. ಆದರೆ, ಕೋವಿಡ್ ತ್ಯಾಜ್ಯವನ್ನು 24 ಗಂಟೆಗಿಂತ ಹೆಚ್ಚು ಕಾಲ ಇಡುವ ಹಾಗಿಲ್ಲ. ಹಾಗಾಗಿ ಈ ಕಸವನ್ನು ಕಾಲಕಾಲಕ್ಕೆ ಸಂಗ್ರಹಿಸಿ ಅತಿ ಹೆಚ್ಚು ಉಷ್ಣಾಂಶದಲ್ಲಿ ಸುಡಲಾಗುತ್ತದೆ. ಅತೀ ಕಡಿಮೆ ಬೂದಿ ಬರುವ ರೀತಿಯಲ್ಲಿ ಈ ತ್ಯಾಜ್ಯ ವಿಲೇವಾರಿಯಾಗುತ್ತದೆ.

ಬೆರಳ ತುದಿಯಲ್ಲಿ ಮಾಹಿತಿ: ಕೋವಿಡ್ ಜೈವಿಕ ತ್ಯಾಜ್ಯ ವಿಲೇವಾರಿ ಮಾಹಿತಿಯನ್ನು ಪೋರ್ಟಲ್​ಗೆ ಅಳವಡಿಸುವುದರಿಂದ ಜಿಲ್ಲೆ/ರಾಜ್ಯ ಹೀಗೆ ಎಲ್ಲ ಹಂತದಲ್ಲೂ ಕ್ಷಣಕ್ಷಣದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ.

ಬೇರೆ ಜಿಲ್ಲೆಗೆ ಸಾಗಿಸಿ ವಿಲೆ!

ರಾಜ್ಯದ 26 ಜಿಲ್ಲೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಗಳಿದ್ದು, ಯಾವ ಜಿಲ್ಲೆಯಲ್ಲಿ ಘಟಕಗಳಿಲ್ಲವೋ ಅಲ್ಲಿಗೆ ಸಮೀಪದ ಜಿಲ್ಲೆಯಲ್ಲಿರುವ ಘಟಕಗಳಿಗೆ ಕೋವಿಡ್ ತ್ಯಾಜ್ಯ ಕೊಂಡೊಯ್ದು ವಿಲೇವಾರಿ ಮಾಡಲಾಗುತ್ತಿದೆ. ಈ ತ್ಯಾಜ್ಯ ಸಂಗ್ರಹಣೆಯಿಂದ ವಿಲೇವಾರಿ ಹಂತದ ವರೆಗೆ ಕೆಲಸ ನಿರ್ವಹಿಸುವವರಿಗೆ ಪಿಪಿಇ ಕಿಟ್ ಪೂರೈಸಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಕೋವಿಡ್ ತ್ಯಾಜ್ಯ ನಿರ್ವಹಣೆಗೆಂದೇ ಮಂಡಳಿ ದೇಶದಲ್ಲೇ ಮೊದಲ ಬಾರಿಗೆ ವಿಶೇಷವಾಗಿ ಪೋರ್ಟಲ್ ಸಿದ್ಧಪಡಿಸಿ, ಕಸ ವಿಲೇವಾರಿ ಮೇಲೆ ಕಣ್ಗಾವಲಿರಿಸಿದೆ. ಕೇಂದ್ರದ ಮಾರ್ಗಸೂಚಿ ಅನುಸರಿಸಿಯೇ ಈ ಕಸ ನಿರ್ವಹಣೆ ಮಾಡಲಾಗುತ್ತಿದೆ. | ವಿಜಯ್ಕುಮಾರ್ ಗೋಗಿ ಅಧ್ಯಕ್ಷರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
ಎಲ್ಲೆಲ್ಲಿ ಸಂಗ್ರಹ

ರಾಜ್ಯದಲ್ಲಿ ಕೋವಿಡ್​ಗೆ ಸಂಬಂಧಿಸಿದ 31 ಪ್ರತ್ಯೇಕ ಆಸ್ಪತ್ರೆಗಳು ಹಾಗೂ 350ಕ್ಕೂ ಹೆಚ್ಚು ಕ್ವಾರಂಟೈನ್ ಕೇಂದ್ರಗಳಿವೆ. ಈ ಎಲ್ಲ ಸ್ಥಳಗಳಿಂದ ಕೋವಿಡ್ ಕಸವನ್ನು ಪ್ರತಿ ನಿತ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.

1.05 ಲಕ್ಷ ಕೆಜಿ ತ್ಯಾಜ್ಯ ವಿಲೇವಾರಿ: ಕೋವಿಡ್ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿ ಸುತ್ತಿರುವ ದಿನದಿಂದ ಮೇ 10 ರವರೆಗೆ 1.05 ಲಕ್ಷ ಕೆಜಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಆ ಎಲ್ಲವನ್ನು ವೈಜ್ಞಾನಿಕವಾಗಿ ದಹಿಸಲಾಗಿದೆ.

ಬೂದಿಯೂ ಲೆಕ್ಕಕ್ಕೆ

ಕೋವಿಡ್ ತ್ಯಾಜ್ಯದಿಂದ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ತ್ಯಾಜ್ಯ ಸಂಗ್ರಹಣಾ ಸ್ಥಳಗಳಿಂದ ಹಿಡಿದು ದಹನ ಕ್ರಿಯೆಯವರೆಗಿನ ಎಲ್ಲ ಹಂತಗಳ ಮೇಲೂ ನಿಗಾ ಇರಿಸಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ, ಕೋವಿಡ್ ತ್ಯಾಜ್ಯ ದಹಿಸಿದ ಮೇಲೆ ಬರುವ ಬೂದಿಯ ಪ್ರಮಾಣವನ್ನೂ ಅಳತೆ ಮಾಡಲಾಗುತ್ತದೆ! ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ವಿಲೇವಾರಿ ನಡೆಯುತ್ತಿದ್ದರೂ ಸಂಗ್ರಹಣೆ ಮತ್ತು ವರದಿಯನ್ನು ವೈಜ್ಞಾನಿಕವಾಗಿ ಈ ಪೋರ್ಟಲ್ ಮೂಲಕ ಮಾಡಲಾಗುತ್ತಿದೆ.