ಲಖನೌ: ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಮಂಬರುವ ಸೆಮಿಸ್ಟರ್ನಲ್ಲಿ ಬಯೋಕೆಮಿಸ್ಟ್ರಿ ಸ್ನಾತಕೋತ್ತರ ಕೋರ್ಸ್ ಪಠ್ಯಕ್ರಮದಲ್ಲಿ ಕೋವಿಡ್19 ಕೊರೊನಾವೈರಸ್ ಕುರಿತ ವಿಷಯ ಸೇರಿಸಲು ಲಖನೌ ವಿಶ್ವವಿದ್ಯಾಲಯ ನಿರ್ಧರಿಸಿದೆ.
"ಎಂಎಸ್ಸಿ ಬಯೋಕೆಮಿಸ್ಟ್ರಿ ಮೊದಲ ಸೆಮಿಸ್ಟರ್ನಲ್ಲಿ ಕೋವಿಡ್ 19 ಕುರಿತು ಒಂದು ಘಟಕವನ್ನು ಪರಿಚಯಿಸಲು ನಾವು ನಿರ್ಧರಿಸಿದ್ದೇವೆ. ಈ ಘಟಕ ಕೋವಿಡ್ 19 ಹರಡುವಿಕೆ ಮತ್ತು ಸೋಂಕನ್ನು ನಿರ್ವಹಿಸುವ ಮಾರ್ಗಗಳಂತಹ ಅಂಶಗಳನ್ನು ಒಳಗೊಳ್ಳುತ್ತದೆ'' ಎಂದು ವಿವಿಯ ಉಪಕುಲಪತಿ ಅಲೋಕ್ ರೈ ತಿಳಿಸಿದ್ದಾರೆ.
ಬಯೋಕೆಮಿಸ್ಟ್ರಿ ವಿಭಾಗದ ಶಿಕ್ಷಕರೊಂದಿಗೆ ಒಪ್ಪಂದ ಮಾಡಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದರ ಪ್ರಕಾರ ಶಿಕ್ಷಕರು ಪಠ್ಯಕ್ರಮ ತಯಾರಿಸುತ್ತಿದ್ದಾರೆ. ಪ್ರಸ್ತಾವನೆ ಸೇರಿದಂತೆ ಅಂತಿಮ ಪಠ್ಯಕ್ರಮವನ್ನು ವಿವಿಯ ಮುಂದಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮಂಡಿಸಲಾಗುವುದು.
ಬಯೋ ಕೆಮಿಸ್ಟ್ರಿಯಷ್ಟೇ ಅಲ್ಲದೆ, ಕೋವಿಡ್19 ವಿಷಯವನ್ನು ಸಾರ್ವಜನಿಕ ಆರೋಗ್ಯ ಕೋರ್ಸ್ನಲ್ಲಿ ಸೇರಿಸಲಾಗುವುದು. ಕೋವಿಡ್ 19 ನಿಂದಾಗಿ ಜಗತ್ತು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದೆ. ವಿದ್ಯಾಥಿರ್ಗಳು ವೈರಸ್ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವಿ ವಕ್ತಾರ ದುರ್ಗೇಶ ಶ್ರೀವಾಸ್ತವ್ ತಿಳಿಸಿದ್ದಾರೆ. ವಿವಿ ಈ ಮೊದಲು ಸಂತೋಷ ಮತ್ತು ಯೋಗಕ್ಷೇಮದ ಕುರಿತು ಕೋರ್ಸ್ಗಳನ್ನು ಪರಿಚಯಿಸಿತ್ತು.
ಲಾಕ್ಡೌನ್ ಜಾರಿಯಾದ ಕಾರಣ ವಿವಿಯ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಶಿಕ್ಷಕರು ಆನ್ಲೈನ್ ತರಗತಿ ನಡೆಸುತ್ತಿದ್ದಾರೆ. ಹಲವು ಶಿಕ್ಷಕರು ಅಧ್ಯಯನ ಸಾಮಗ್ರಿಯನ್ನು ವಿದ್ಯಾಥಿರ್ಗಳಿಗೆ ಅನುಕೂಲವಾಗುವಂತೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿವಿ ಆನ್ಲೈನ್ ವೃತ್ತಿ ಸಮಾಲೋಚನೆ ನಡೆಸುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತಿದೆ.