ಕೊವಿಡ್-19 ರೋಗಿಗಳಿಗೆ ಬೆಡ್ ಸಿಗದೆ ಪರದಾಡುತ್ತಿರುವುದು, ಹಲವು ಆಸ್ಪತ್ರೆಗಳಲ್ಲಿ ಸರಿಯಾದ ಆಹಾರ ವ್ಯವಸ್ಥೆ ಮಾಡದೆ ಇರುವುದು ಅಲ್ಲಲ್ಲಿ ವರದಿಯಾಗುತ್ತಿದೆ.
ಈ ಮಧ್ಯೆ ಇನ್ನೊಂದು ಎಡವಟ್ಟಿನ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದಲ್ಲಿ ನಡೆದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಮೂವರು ಕೊವಿಡ್-19 ಸೋಂಕಿತರನ್ನು ಪುರಸಭೆಯ ಕಸ ಸಾಗಿಸುವ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಈ ಘಟನೆ ನಡೆದಿದ್ದು ವಿಜಿಯಾನಗರಂ ಜಿಲ್ಲೆಯ ನೆಲ್ಲಿಮಾರ್ಲಾ ಪುರಸಭೆಯ ವ್ಯಾಪ್ತಿಯಲ್ಲಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಹಾಗೇ ಸಾಮಾನ್ಯ ಜನರಿಂದ ಅಷ್ಟೇ ಅಲ್ಲದೆ, ತೆಲುಗು ದೇಶಂ ಪಾರ್ಟಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ಪ್ರತಿಪಕ್ಷ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಭಾನುವಾರ ರಾತ್ರಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದೊಂದು ದಿಗಿಲುಗೊಳಿಸುವ ದೃಶ್ಯ. ಇಲ್ಲಿ ನೋಡಿ ಬಿಸಿ ಕಾಲನಿಯ ಮೂವರು ಕೊವಿಡ್-19 ರೋಗಿಗಳನ್ನು ಕಸದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಈ ಅಸಹಾಯಕ ರೋಗಿಗಳನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ. ಇವರು ಕರೊನಾದೊಂದಿಗೆ ಇನ್ನೂ ಯಾವುದಾದರೂ ಅಪಾಯಕಾರಿ ರೋಗಕ್ಕೆ ತುತ್ತಾಗಬಹುದು. ಅದ್ಯಾಕೆ ಇವರನ್ನು ಮನುಷ್ಯರಂತೆ ನೋಡಲಾಗುತ್ತಿಲ್ಲ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಕಸ ಸಾಗಿಸುವ ಮಿನಿ ಟ್ರಕ್ ಮೇಲೆ ಹತ್ತಿ ಹೋಗುವುದನ್ನು ನೋಡಬಹುದು. ಅ ಗಾಡಿಯ ಮೇಲೆ ಸ್ವಚ್ಛ ಭಾರತ್...ಸ್ವಚ್ಛ ನೆಲ್ಲಿಮರ್ಲಾ ಎಂದು ಬರೆದುಕೊಂಡಿದ್ದನ್ನು ನೋಡಬಹುದು. ಹಾಗೇ ಪಿಪಿಇ ಕಿಟ್ ಹಾಕಿಕೊಂಡವನ್ನೊಬ್ಬ ಆ ಮಿನಿ ಟ್ರಕ್ನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾನೆ.
ಈ ಬಗ್ಗೆ ನೆಲ್ಲಿಮರ್ಲಾ ಮುನ್ಸಿಪಲ್ಟಿ ಕಮಿಷನರ್ ಜೆ.ಆರ್.ಅಪ್ಪಾಲಾ ನಾಯ್ಡು ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಯಾವತ್ತೂ ಪುರಸಭೆಯ ಕಸದ ಗಾಡಿಯನ್ನು ಕೊವಿಡ್-19 ರೋಗಿಗಳನ್ನು ಕರೆದುಕೊಂಡು ಹೋಗಲು ಬಳಸಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ. ಆದರೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿವೆ. (ಏಜೆನ್ಸೀಸ್)