ನವದೆಹಲಿ: ಕರೊನಾಗೂ ಕಾಲಮಾನಕ್ಕೂ ಸಂಬಂಧವಿದೆ ಎಂದು ಹಲವು ಅಧ್ಯಯನಗಳು ವಾದಿಸುತ್ತಲೇ ಬಂದಿವೆ. ಕೋವಿಡ್ಗೆ ಕಾರಣವಾಗುವ ವೈರಸ್ ಹೆಚ್ಚಿನ ತಾಪಮಾನದಲ್ಲಿ ಬದುಕಲ್ಲ, ಈ ವೈರಸ್ ಗಾಳಿಯಿಂದ ಹಬ್ಬುತ್ತದೆ ಎಂಬೆಲ್ಲ ವಾದಗಳು ಕೇಳಿ ಬಂದವು. ಅದನ್ನು ಕೆಲ ತಜ್ಞರು ನಿರಾಕರಿಸುತ್ತಲೇ ಬಂದಿದ್ದಾರೆ.
ಆದರೆ, ಕೋವಿಡ್ಗೂ ವಾತಾವರಣದಲ್ಲಾಗುವ ಬದಲಾವಣೆಗೂ ಹತ್ತಿರದ ಸಂಬಂಧವಿದೆ ಎಂದು ಆಸ್ಟ್ರೇಲಿಯಾದ ಸಿಡ್ನಿ ವಿವಿ ಸಂಶೋಧಕರು ಹೇಳಿದ್ದಾರೆ. ಅದರಂತೆ, ವಾತಾವರಣದ ತೇವಾಂಶ ಅಥವಾ ಆದೃತೆಯಲ್ಲಿ ಶೇ.1ರಷ್ಟು ಕಡಿಮೆಯಾದರೆ ಕೋವಿಡ್ ಪ್ರಕರಣಗಳಲ್ಲಿ ಶೇ.6 ರಷ್ಟು ಹೆಚ್ಚಳವಾಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಟ್ರಾನ್ಸ್ಬೌಂಡರಿ ಆ್ಯಂಡ್ ಎಮರ್ಜಿಂಗ್ ಡೀಸಿಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ
ಕೋವಿಡ್ ಕಾಲಮಾನ ಆಧರಿಸಿದ ಕಾಯಿಲೆಯಾಗಿರಲಿದೆ. ಅದರಂತೆ ಚಳಿಗಾಲವೆಂದರೆ ಕೋವಿಡ್ ಕಾಲವೆಂದು ಹೇಳಬಹುದು ಎಂದು ಸಿಡ್ನಿ ವಿವಿಯಲ್ಲಿ ಸಾಂಕ್ರಾಮಿಕ ರೋಗಗಳ ಸಂಶೋಧಕ ಮೈಕಲ್ ವಾರ್ಡ್ ಹೇಳಿದ್ದಾರೆ.
ಈ ಅಧ್ಯಯನದಲ್ಲಿ ಪ್ರಮುಖವಾಗಿ ಕಂಡುಕೊಳ್ಳಲಾಗಿರುವ ಅಂಶವೆಂದರೆ, ನಾವು ಸೀನಿದಾಗ ಅಥವಾ ಕೆಮ್ಮಿದಾಗ ಅದರಲ್ಲಿರುವ ಕಣಗಳು ತೀರಾ ಸೂಕ್ಷ್ಮ ಹಾಗು ಹಗುರವಾಗಿರುತ್ತವೆ. ಒಂದು ವೇಳೆ ಗಾಳಿಯಲ್ಲಿ ತೇವಾಂಶ ಕಡಿಮೆ ಇದ್ದರೆ, ಅವು ಬಹುಕಾಲ ಗಾಳಿಯಲ್ಲಿಯೇ ಉಳಿದುಕೊಳ್ಳುತ್ತವೆ. ಆ ಮೂಲಕ ಇತರರಿಗೆ ಹಬ್ಬುವ ಸಂಭಾವ್ಯತೆ ಹೆಚ್ಚು. ಅದೇ ಗಾಳಿಯಲ್ಲಿನ ತೇವಾಂಶ ಹೆಚ್ಚಾದರೆ, ಈ ಕಣಗಳು ಹೆಚ್ಚು ವಿಸ್ತಾರ ಹಾಗೂ ಭಾರವಾಗುತ್ತವೆ. ಆಗ ತ್ವರಿತವಾಗಿ ಭೂಮಿಗಿಳಿಯುತ್ತವೆ. ಇದರಿಂದ ಹಬ್ಬುವಿಕೆಯ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ ಎನ್ನುವುದು ಈ ಸಂಶೋಧನೆಯ ಸಾರಾಂಶ.
ಇದನ್ನೂ ಓದಿ; ಕರೊನಾ ನಿಗ್ರಹ ಲಸಿಕೆ ಶೇ.99 ಯಶಸ್ವಿ; ಚೀನಿ ಕಂಪನಿ ವಿಶ್ವಾಸ, ಬೀಜಿಂಗ್ ಹೊರವಲಯದಲ್ಲಿ ಬೃಹತ್ ಕಾರ್ಖಾನೆ
ಹೀಗಾಗಿ ಒಣಗಾಳಿಯಿರುವ ಪ್ರದೇಶಗಳಲ್ಲಿ ಕೋವಿಡ್ ವ್ಯಾಪಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಸಾರ್ಸ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಮೆರ್ಸ್ ಕಾಯಿಲೆಗೂ ವಾತಾವರಣದೊಂದಿಗೆ ನೇರ ಸಂಬಂಧವಿರುವುದು ಗೊತ್ತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಚೀನಾದಲ್ಲಿ ಕರೊನಾ ಹರಡುವುದಕ್ಕೂ ಅಲ್ಲಿನ ದೈನಂದಿನ ಉಷ್ಣಾಂಶ ಹಾಗೂ ವಾತಾವರಣದ ತೇವಂಶಕ್ಕೂ ನೇರ ಸಂಬಂಧವಿರುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಅಗತ್ಯ ಎನ್ನುವುದು ವರದಿಯ ಉಪಸಂಹಾರವಾಗಿದೆ.