ನ್ಯೂಸ್

ಚೀನಾದಿಂದ ಕರೊನಾ ನಷ್ಟ ವಸೂಲಿ! ಟ್ರಂಪ್ ಆಡಳಿತ ವಿರುದ್ಧ ಹೆಚ್ಚುತ್ತಿರುವ ಜನರ ಅಸಮಾಧಾನ ಸುದ್ದಿ ಸಮಗ್ರದಲ್ಲಿ ವಿಶ್ಲೇಷಣೆ

ವಾಷಿಂಗ್ಟನ್: ಮಹಾಮಾರಿ ಕರೊನಾ ವೈರಸ್ ಬಗ್ಗೆ ಚೀನಾ ಗುಟ್ಟು ಬಿಟ್ಟುಕೊಡದೇ ಜನರ ಜೀವದ ಜತೆ ಚೆಲ್ಲಾಟವಾಡಿದೆ ಎಂದು ಅಮೆರಿಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 26 ಕೋಟಿಗೂ ಅಧಿಕ ಜನರು ಉದ್ಯೋಗ ಕಳೆದುಕೊಂಡು, ಆರ್ಥಿಕತೆ ನೆಲಕಚ್ಚಿರುವುದಕ್ಕೆ ಚೀನಾ ನೇರ ಕಾರಣ ಎಂದು ಆರೋಪಿಸಿರುವ ಅಮೆರಿಕದ ಪ್ರಮುಖ ರಾಜಕಾರಣಿಗಳು, ಇದಕ್ಕೆ ಚೀನಾದಿಂದಲೇ ನಷ್ಟ ಪರಿಹಾರ ವಸೂಲಿ ಮಾಡಬೇಕು ಎಂದು ಟ್ರಂಪ್ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಾಯಕರು ಚೀನಾ ವಿರುದ್ಧ ನಷ್ಟ ವಸೂಲಿಗಾಗಿ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸಾರ್ವಜನಿಕರಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಜತೆಗೆ ಅಮೆರಿಕದಲ್ಲಿರುವ ಚೀನಾದ ಅಧಿಕಾರಿಗಳ ವಿರುದ್ಧ ನಿರ್ಬಂಧಗಳನ್ನು ಹೇರಿ ಚೀನಾ ಉಂಟುಮಾಡಿರುವ ನಷ್ಟಕ್ಕೆ 1 ಟ್ರಿಲಿಯನ್ ಡಾಲರ್ ಪರಿಹಾರ ವಸೂಲಿ ಮಾಡುವಂತೆ ಸಲಹೆ ನೀಡಿದ್ದಾರೆ. ಈ ನಾಯಕರ ಗುಂಪಿನಲ್ಲಿ ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ಮತ್ತು ದಕ್ಷಿಣ ಕೆರೊಲಿನಾದ ಮಾಜಿ ರಾಜ್ಯಪಾಲರಾದ ಭಾರತೀಯ ಅಮೆರಿಕನ್ ನಿಕ್ಕಿ ಹ್ಯಾಲೆ ಕೂಡ ಇದ್ದಾರೆ. ಕರೊನಾವೈರಸ್ ಬಗ್ಗೆ ಸುಳ್ಳು ಹೇಳಿದ್ದರ ಹೊಣೆಗಾರನನ್ನಾಗಿ ಚೀನಾದ ಕಮ್ಯೂನಿಸ್ಟ್ ಸರ್ಕಾರವನ್ನು ಗುರಿಮಾಡಬೇಕು ಹಾಗೂ ಚೀನಾ ವಿರುದ್ಧ ಅಮೆರಿಕ ಈಗ ಕ್ರಮ ಕೈಗೊಳ್ಳಲೆಬೇಕು ಎಂದು ನಿಕ್ಕಿ ಆಗ್ರಹಿಸಿದ್ದಾರೆ. ಒಮ್ಮತಕ್ಕೆ ಯತ್ನ

ಚೀನಾ ವಿರುದ್ಧ ಕ್ರಮದ ಬಗ್ಗೆ ಡೊನಾಲ್ಡ್ ಟ್ರಂಪ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಆದರೆ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಚೀನಾ ವಿರುದ್ಧ ಇತರ ರಾಷ್ಟ್ರಗಳಲ್ಲಿ ಒಮ್ಮತದ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜತೆಗೂ ಮಾತನಾಡಿರುವ ಪಾಂಪಿಯೊ, ಕರೊನಾ ಬಗ್ಗೆ ಚೀನಾಗೆ 2019ರ ಅಂತ್ಯದಲ್ಲೇ ಗೊತ್ತಿತ್ತು ಹಾಗೂ ವೈರಸ್ ವುಹಾನ್​ನಲ್ಲೇ ಜನ್ಮತಾಳಿದೆ ಎಂಬ ಮಾಹಿತಿಗಳನ್ನು ರ್ಚಚಿಸಿದ್ದಾರೆ ಎಂದು ತಿಳಿದುಬಂದಿದೆ. ಜನಪ್ರಿಯತೆ ಕುಂಠಿತ

ಕರೊನಾ ವೈರಸ್​ನಿಂದಾಗಿ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಅಮೆರಿಕದ ಶೇ. 66 ಜನರು ಅಲ್ಲಿನ ಆಡಳಿತ ಬಗ್ಗೆ ವಿರುದ್ಧ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲಿ ಇದರ ಪ್ರಮಾಣ ಶೇ.47 ರಷ್ಟಿತ್ತು ಎಂದು ಪಿವ್ ರಿಸರ್ಚ್ ಸೆಂಟರ್​ನ ಅಧ್ಯಯನದಿಂದ ತಿಳಿದುಬಂದಿದೆ.

ಹೂಡಿಕೆ ಮುಟ್ಟುಗೋಲಿಗೆ ಆಗ್ರಹ: ಚೀನಾ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಇನ್ನೂ ಕೆಲ ನಾಯಕರು ಅಮೆರಿಕದ ಬಾಂಡ್​ಗಳಲ್ಲಿ ಚೀನಾ ಹೂಡಿರುವ 1 ಟ್ರಿಲಿಯನ್ ಡಾಲರ್​ಗಿಂತ ಹೆಚ್ಚಿನ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚಿನ ಸುಂಕ ಹೇರಬೇಕು ಎಂದು ಕೋರಿದ್ದಾರೆ. ಆದರೆ ಬಾಂಡ್​ಗಳ ಮೇಲಿನ ಚೀನಾದ ಹೂಡಿಕೆಯನ್ನು ಮುಟ್ಟುಗೋಲು ಹಾಕಿಕೊಂಡರೆ ಹಣ ಮರುಪಾವತಿ ಬಗ್ಗೆ ಅಮೆರಿಕ ನೀಡಿರುವ ಭರವಸೆ ಮೇಲಿನ ನಂಬಿಕೆ ಸುಳ್ಳಾಗಿ ವಿಶ್ವದ ಹಣಕಾಸು ವ್ಯವಸ್ಥೆ ಹಳಿ ತಪು್ಪತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತ, ಜಪಾನ್ ಹಾಗೂ ಅನೇಕ ಕೊಲ್ಲಿ ರಾಷ್ಟ್ರಗಳು ಸೇರಿ ಅಮೆರಿಕದ ಬಾಂಡ್​ಗಳಲ್ಲಿ ಸುಮಾರು 160 ಬಿಲಿಯನ್​ನಷ್ಟು ಹೂಡಿಕೆ ಹೊಂದಿವೆ.

ಚೀನಾ ವಿರುದ್ಧ 20 ಟ್ರಿಲಿಯನ್ ಡಾಲರ್ ಮೊಕದ್ದಮೆ: ಕರೊನಾ ವೈರಸ್​ಗೆ ಚೀನಾ ನೇರ ಕಾರಣ ಎಂದು ಆರೋಪಿಸಿ ಅಮೆರಿಕದ ವಕೀಲ ಲ್ಯಾರಿ ಕ್ಲೇಮನ್ ನೇತೃತ್ವದ ತಂಡ ಚೀನಾ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಬರೋಬ್ಬರಿ 20 ಟ್ರಲಿಯನ್ ಡಾಲರ್ ನಷ್ಟ ಪರಿಹಾರದ ಮೊಕದ್ದಮೆ ಹೂಡಿದೆ. ಈ ಮೊತ್ತ ಚೀನಾದ ಒಟ್ಟು ಜಿಡಿಪಿಗಿಂತಲೂ ಹೆಚ್ಚಿದೆ. ಇದಕ್ಕೂ ಮೊದಲು ಅಮೆರಿಕದ ಮಿಸ್ಸೌರಿ ರಾಜ್ಯ ಚೀನಾ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಚೀನಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮೊದಲ ರಾಜ್ಯ ಇದಾಗಿದೆ. ಕರೊನಾ ವೈರಸ್​ನ್ನು ಜೈವಿಕ ಆಯುಧವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆರೋಪಿಸಿ ಚೀನಾ ಚೀನಾ ಸರ್ಕಾರ ಮತ್ತು ಸೇನೆ, ವುಹಾನ್​ನಲ್ಲಿನ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಅದರ ನಿರ್ದೇಶಕ ಶೀ ಝೆಂಗ್ಲಿ, ಚೀನಾ ಸೇನೆಯ ಮೇಜರ್ ಜನರಲ್ ಚೆನ್ ವೀ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಅಮೆರಿಕದ ಪ್ರಜೆಗಳ ಸಾವಿಗೆ ಕಾರಣವಾಗಿರುವ ಆರೋಪಗಳನ್ನೂ ಹೊರಿಸಲಾಗಿದೆ.

ಚೀನಾಕ್ಕೆ ಪ್ರತಿಕೂಲ ಸನ್ನಿವೇಶ: ಕರೊನಾ ವೈರಸ್ ಮಾಹಿತಿ ಮುಚ್ಚಿಡುವಿಕೆ, ಹರಡುವಿಕೆ ಮತ್ತಿತರ ಕಾರಣಗಳನ್ನಿಟ್ಟುಕೊಂಡು ಅಮೆರಿಕ ಸರ್ಕಾರ ಅಥವಾ ಜನರು ಚೀನಾ ಮೇಲೆ ಪ್ರಕರಣಗಳನ್ನು ಹೂಡಬಹುದು. ಅಮೆರಿಕ ಕೋರ್ಟುಗಳು ಚೀನಾವನ್ನು ತಪ್ಪಿತಸ್ಥ ಎಂದು ಘೋಷಿಸಿ ದಂಡ ಕಟ್ಟುವಂತೆಯೂ ಹೇಳಬಹುದು. ಆದರೆ ಚೀನಾ ಇದನ್ನು ಪಾಲಿಸಲೇಬೇಕು ಎಂದಿಲ್ಲ. ಏಕೆಂದರೆ, ಈ ಆರೋಪಗಳಿಗೆ ನಿರ್ದಿಷ್ಟ ಪುರಾವೆಗಳನ್ನು ಒದಗಿಸುವುದು ಕಷ್ಟ. ಆಮದು -ರಫ್ತು ವ್ಯವಹಾರದಂಥವುಗಳಾದರೆ ಖಚಿತವಾಗಿ ಪುರಾವೆಗಳನ್ನು ನೀಡಬಹುದು. ಆದರೂ ಅಮೆರಿಕಕ್ಕೆ ಚೀನಾವನ್ನು ಕಾಡಲು ಬೇರೆ ಮಾರ್ಗಗಳೂ ಇವೆ. ನಿರ್ಬಂಧ ಹೇರಿಕೆ, ಸುಂಕ ಹೆಚ್ಚಳ ಇತ್ಯಾದಿ. ಆದರೆ ಅಂಥ ಕ್ರಮಗಳಿಗೆ ಚೀನಾವೂ ಎದಿರೇಟು ನೀಡುವುದರಿಂದ ಇಂಥ ಕ್ರಮಗಳ ಅಂತಿಮ ಫಲಿತಾಂಶದ ಅಂದಾಜು ಕಷ್ಟ. ಇನ್ನು, ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಹೋದರೂ ಹೆಚ್ಚಿನ ಪ್ರಯೋಜನವೇನಾಗದು. ಏಕೆಂದರೆ, ಆ ಕೋರ್ಟಿನ ತೀರ್ಪಗಳನ್ನು ಪಾಲಿಸಲೇಬೇಕೆಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಅಮೆರಿಕ, ಚೀನಾದಂಥ ದೇಶಗಳು ತಮಗೆ ಅನುಕೂಲಕರವಲ್ಲದ ತೀರ್ಪು ಬಂದರೆ ಪಾಲಿಸುವುದೂ ಇಲ್ಲ. ಹೀಗಿದ್ದರೂ, ಯುರೋಪ್ ದೇಶಗಳು ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಕರೊನಾ ವಿಚಾರದಲ್ಲಿ ಚೀನಾ ಮೇಲೆ ಸಂಶಯ ಮೂಡಿರುವುದರಿಂದಾಗಿ, ಕ್ರಮೇಣ ಜಾಗತಿಕವಾಗಿ ಚೀನಾಕ್ಕೆ ಪ್ರತಿಕೂಲಕರ ಸನ್ನಿವೇಶ ಹರಳುಗಟ್ಟುತ್ತಿರುವುದಂತೂ ನಿಜ.

| ಎನ್.ಪಾರ್ಥಸಾರಥಿ ಮಾಜಿ ರಾಯಭಾರಿ, ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ