ನ್ಯೂಸ್

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯುವ ಗುರಿ: ದಿಗ್ಗಜರ ಸಮಾಗಮಕ್ಕೆ ಸೆಮಿಕಾನ್ ಇಂಡಿಯಾ 2022 ವೇದಿಕೆ

Webdesk - Ravikanth

ಬೆಂಗಳೂರು: ದೇಶದ ಸೆಮಿಕಂಡಕ್ಟರ್ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮೂರು ದಿನಗಳ ಸೆಮಿಕಾನ್ ಇಂಡಿಯಾ 2022 ಸಮ್ಮೇಳನಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಸೆಮಿಕಂಡಕ್ಟರ್ ಕ್ಷೇತ್ರದ ದಿಗ್ಗಜ ಕಂಪನಿಗಳು, ತಂತ್ರಜ್ಞರ ಸಮಾಗಮವಾಗಿರುವ ಈ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿಯೇ ವಿಸ್ತೃವಾಗಿ ಬಿಡಿಸಿಟ್ಟರು.

ಇನ್ನು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶೀಯ ಸೆಮಿಕಂಡಕ್ಟರ್ ತಯಾರಕರನ್ನು ಪ್ರೋತ್ಸಾಹಿಸುವ ಸಲುವಾಗಿ ಮುಂದಿನ ಆರೆಂಟು ತಿಂಗಳಲ್ಲಿ ಎಲೆಕ್ಟ್ರಾನಿಕ್ ಚಿಪ್​ಗಳ ತಯಾರಕರಿಗೆ ಅನುಮೋದನೆ ನೀಡಲಾಗುವುದು. ಎಲೆಕ್ಟ್ರಾನಿಕ್ ಚಿಪ್ ತಯಾರಿಸಲು 1.53 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು 5 ಕಂಪನಿಗಳು ಮುಂದೆ ಬಂದಿದ್ದು, ಪ್ರಸ್ತಾವನೆ ಸ್ವೀಕರಿಸಲಾಗಿದೆ ಎಂಬ ಮಹತ್ವ ಸಂಗತಿಯನ್ನು ತಿಳಿಸಿದರು.

ಇಡೀ ಸಮ್ಮೇಳನದ ನೊಗ ಹೊತ್ತ ಕೇಂದ್ರ ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಭಾರತವು ಬಳಸಿಕೊಳ್ಳುವ ಅಗತ್ಯತೆ ಮತ್ತು ಹೂಡಿಕೆಗಿರುವ ಅವಕಾಶದ ಬಗ್ಗೆ ತಿಳಿಸಿಕೊಟ್ಟರು.

ವರ್ಚುಯಲ್ ಮೂಲಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸ್ತುತ ಜಗತ್ತಿನಲ್ಲಿ ಸೆಮಿಕಂಡಕ್ಟರ್ ನಿರ್ಣಾಯಕವೆನಿಸಿದೆ. ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಚೈನ್​ನಲ್ಲಿ ಭಾರತವನ್ನು ಪ್ರಮುಖ ಪಾಲುದಾರನನ್ನಾಗಿ ಮಾಡುವುದು ನಮ್ಮ ಸಾಮೂಹಿಕ ಗುರಿಯಾಗಿದೆ ಎಂದು ಹೇಳಿದರು.

ನಮ್ಮ ಉತ್ಪಾದನೆ ಆಧರಿತ ಪೋ›ತ್ಸಾಹಧನ ಯೋಜನೆಗಳು 14 ಪ್ರಮುಖ ವಲಯಗಳಲ್ಲಿ 26 ಶತಕೋಟಿ ಡಾಲರ್​ಗಳಿಗೂ ಹೆಚ್ಚು ಪೋ›ತ್ಸಾಹಕಗಳನ್ನು ನೀಡುತ್ತವೆ ಎಂದ ಅವರು ಮುಂದಿನ 5 ವರ್ಷಗಳಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಹೂಡಿಕೆಗೆ ಭಾರತ ಸೂಕ್ತವೇಕೆ?

ಮೋದಿ ಕೊಟ್ಟ ಆರು ಕಾರಣ

  1. ಆರೋಗ್ಯ ಮತ್ತು ಕಲ್ಯಾಣ, ಆಡಳಿತದ ಎಲ್ಲ ವಲಯಗಳಲ್ಲಿ ಪರಿವರ್ತನೆ ತರಲು ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ಭಾರತವು ತಲಾವಾರು ಡೇಟಾದ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ಬೆಳೆಯುತ್ತಲೇ ಇದ್ದೇವೆ.
  2. ಮುಂದಿನ ತಂತ್ರಜ್ಞಾನ ಕ್ರಾಂತಿ ಮುನ್ನಡೆಸಲು ಭಾರತ ತಯಾರಾಗಿದೆ. ನಾವು ಆರು ಲಕ್ಷ ಹಳ್ಳಿಗಳನ್ನು ಬ್ರಾಡ್​ಬ್ಯಾಂಡ್​ನೊಂದಿಗೆ ಸಂರ್ಪಸಲು ಹೊರಟಿದ್ದೇವೆ. 5ಜಿ, ಐಒಟಿ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯ ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದ್ದೇವೆ. ಡೇಟಾ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯ ಮುಂದಿನ ಅಲೆಯನ್ನು ಅನಾವರಣಗೊಳಿಸಲು ಕೆಲಸ ಮಾಡುತ್ತಿದ್ದೇವೆ.
  3. ಭಾರತವು ದೃಢವಾದ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದ್ದು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಭಾರತ ದೇಶವೊಂದರಲ್ಲೇ ಸೆಮಿ ಕಂಡಕ್ಟರ್​ಗಳ ಬಳಕೆಯು 2026ರ ವೇಳೆಗೆ 80 ಶತಕೋಟಿ ಡಾಲರ್ ಮತ್ತು 2030ರ ವೇಳೆಗೆ 110 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ.
  4. ಭಾರತದಲ್ಲಿ ಸುಗಮ ವ್ಯಾಪಾರೋದ್ಯಮ ಸುಧಾರಿಸಲು ವ್ಯಾಪಕ ಸುಧಾರಣೆ ಕೈಗೊಂಡಿದ್ದೇವೆ. ಕಳೆದ ವರ್ಷ, ನಾವು 25,000ಕ್ಕೂ ಹೆಚ್ಚು ಪ್ರಕ್ರಿಯೆ ರದ್ದುಗೊಳಿಸಿದ್ದೇವೆ ಮತ್ತು ಪರವಾನಗಿಗಳ ಸ್ವಯಂನವೀಕರಣಕ್ಕೆ ಉತ್ತೇಜನ ನೀಡಿದ್ದೇವೆ. ಹಾಗೆಯೇ, ಡಿಜಿಟಲೀಕರಣದಿಂದ ನಿಯಂತ್ರಕ ಚೌಕಟ್ಟಿಗೆ ವೇಗ ಮತ್ತು ಪಾರದರ್ಶಕತೆ ದೊರೆಯುತ್ತಿದೆ. ಅನುಕೂಲಕರ ತೆರಿಗೆ ವ್ಯವಸ್ಥೆ ಹೊಂದಿದ್ದೇವೆ.
  5. ಯುವ ಭಾರತೀಯರಿಗೆ ಕೌಶಲ ಮತ್ತು ತರಬೇತಿ ನೀಡಲು ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ನಾವು ಅಸಾಧಾರಣವಾದ ಸೆಮಿ ಕಂಡಕ್ಟರ್ ವಿನ್ಯಾಸ ಪ್ರತಿಭೆಯ ಭಂಡಾರ ಹೊಂದಿದ್ದೇವೆ, ಈ ಪ್ರಮಾಣವು ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸ ಎಂಜಿನಿಯರ್​ಗಳ ಶೇ.20 ಇದೆ. ಅಗ್ರ 25 ಸೆಮಿ ಕಂಡಕ್ಟರ್ ವಿನ್ಯಾಸ ಕಂಪನಿಗಳು ನಮ್ಮ ದೇಶದಲ್ಲಿ ತಮ್ಮ ವಿನ್ಯಾಸ ಅಥವಾ ಆರ್ ಅಂಡ್ ಡಿ ಕೇಂದ್ರ ಹೊಂದಿವೆ.
  6. ಭಾರತೀಯ ಉತ್ಪಾದನಾ ವಲಯವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಂಡಿದ್ದೇವೆ. ಸಾಂಕ್ರಾಮಿಕದ ವಿರುದ್ಧ ಮನುಕುಲ ಹೋರಾಡುತ್ತಿದ್ದ ಸಮಯದಲ್ಲಿ, ಭಾರತವು ನಮ್ಮ ಜನರ ಆರೋಗ್ಯವನ್ನು ಮಾತ್ರವಲ್ಲದೆ ನಮ್ಮ ಆರ್ಥಿಕತೆಯ ಆರೋಗ್ಯವನ್ನು ಸಹ ಸುಧಾರಿಸುತ್ತಿತ್ತು.

ಚಿಪ್​ಗೆ ಆಗುಂಬೆ ಹೆಸರು!: ಸಮ್ಮೇಳನದ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಿವೆ. ಚಿಪ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದ ವಿಭಿನ್ನ ಆಯಾಮದ ಬೆಳವಣಿಗೆಯ ಅನಾವರಣ ನಡೆದಿದೆ. ಸಿಗ್ನಾಚಿಪ್ ಎಂಬ ಕಂಪನಿಯು ತಾನು ಅಭಿವೃದ್ಧಿಪಡಿಸಿದ ಮೊಬೈಲ್ ಟವರ್​ನಲ್ಲಿ ಬಳಸುವ ಒಂದು ಚಿಪ್​ಗೆ ‘ಆಗುಂಬೆ’ ಎಂದು ಹೆಸರಿಟ್ಟಿದೆ. ಅಮೆರಿಕಾ ಸೇರಿ ಮುಂದುವರಿದ ದೇಶಗಳ ಕಂಪನಿಗಳು ತಮ್ಮ ಭಾಗದ ಗಿರಿ ಶಿಖರ ಅಥವಾ ಭೌಗೋಳಿಕ ಪ್ರದೇಶದ ಹೆಸರಿಡುವ ಸಂಪ್ರದಾಯವಿದೆ. ನಾವೂ ಸಹ ನಮ್ಮ ಹೆಮ್ಮೆಯ ‘ಆಗುಂಬೆ’ ಹೆಸರನ್ನು ಚಿಪ್​ಗೆ ಇಟ್ಟಿ್ಟ್ದೇವೆಂದು ಕಂಪನಿಯ ಪ್ರತಿನಿಧಿ ವಿಜಯವಾಣಿಗೆ ತಿಳಿಸಿದರು.

ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶವಿದ್ದು, ಉದ್ಯೋಗ ಸೃಷ್ಟಿಯ ಶಕ್ತಿ ಇದೆ. ಇದನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು.ಕೇಂದ್ರ ಸರ್ಕಾರ ಈ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವ ಮೂಲಕ ಸಕಾರಾತ್ಮಕ ಸಂದೇಶ ರವಾನಿಸಿದೆ. ರಾಜ್ಯವು ಸೆಮಿಕಂಡಕ್ಟರ್ ಉದ್ದಿಮೆಗಳಿಗೆ ಹೆಚ್ಚಿನ ಭೂಮಿ ಒದಗಿಸಲು ಸಿದ್ಧ. | ಡಾ. ಅಶ್ವತ್ಥ ನಾರಾಯಣ ಐಟಿ ಮತ್ತು ಬಿಟಿ ಸಚಿವ

ಜಗತ್ತೇ ತಿರುಗಿ ನೋಡುವ ರಹದಾರಿ: ಶುಕ್ರವಾರ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರಾಜೀವ್ ಚಂದ್ರಶೇಖರ್, ಸೆಮಿಕಾನ್ ಇಂಡಿಯಾ-2022 ರ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು.

ಭಾರತದ ಸೆಮಿಕಂಡಕ್ಟರ್ ಎಕೋ ಸಿಸ್ಟಂ ಬಗ್ಗೆ ಜಗತ್ತೇ ತಿರುಗಿ ನೋಡುವಂತೆ ಗುರಿ ಹಾಕಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಸೆಮಿಕಾನ್ ಇಂಡಿಯಾವು ಇದರ ಮೊದಲ ಹೆಜ್ಜೆಯಾಗಿದೆ ಎಂದರು. ಮುಂದಿನ 25 ವರ್ಷಗಳಿಗಾಗುವಂತಹ ರಹದಾರಿ ಈ ಮೂಲಕ ಸಿದ್ಧವಾಗುತ್ತಿದೆ. ಸೆಮಿಕಂಡಕ್ಟರ್ ಹಾಗೂ ಸ್ಟಾರ್ಟ್​ಅಪ್ ನೀತಿಗಳು ಇದಕ್ಕೆ ಪೂರಕವಾಗಿರಲಿದೆ. ಮುಂದಿನ ದಿನಗಳಲ್ಲಿ ಇದರ ಫಲ ಸಿಗಲಿದ್ದು, ಪರಿಣಾಮ ಮುಂದಿನ ಪೀಳಿಗೆಯ ಅರಿವಿಗೆ ಬರಲಿದೆ ಎಂದು ತಿಳಿಸಿದರು.

ಎಲೆಕ್ಟ್ರಾನಿಕ್ ಚಿಪ್ ತಯಾರಿಕೆಗೆ ಪ್ರೋತ್ಸಾಹ: ಎಲೆಕ್ಟ್ರಾನಿಕ್ ಚಿಪ್ ತಯಾರಕರು ಹೂಡಿಕೆ ಮಾಡಲು ಉತ್ಸಾಹ ತೋರಿದ್ದು ಸಮ್ಮೇಳನದಲ್ಲಿ ಪ್ರತಿಫಲನವಾಯಿತು. ವೇದಾಂತ್ ಫಾಕ್ಸ್​ಕಾನ್ ಜೆವಿ, ಐಜಿಎಸ್​ಎಸ್ ವೆಂಚರ್ಸ್, ಐಎಸ್​ಎಂಸಿ ಸಂಸ್ಥೆಗಳು 13.6 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ಮೂಲಕ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿವೆ.

ಕೇಂದ್ರ ಸರ್ಕಾರದಿಂದ 5.6 ಬಿಲಿಯನ್ ಯುಎಸ್ ಡಾಲರ್ ನೆರವು ಕೋರಿದ್ದು, ಮೊಬೈಲ್ ಫೋನ್, ಲ್ಯಾಪ್​ಟಾಪ್ ಡಿಸ್ಪೆ್ಲೕ ತಯಾರಿಕಾ ಘಟಕವನ್ನು 6.7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಮಾಡುವುದಾಗಿ ವೇದಾಂತ ಮತ್ತು ಎಲೆಸ್ಟ್ ಕಂಪನಿಗಳು ಪ್ರಸ್ತಾಪಿಸಿವೆ. ಮುಂದಿನ 3 ವರ್ಷಗಳಲ್ಲಿ ಒಟ್ಟಾರೆ 1.7 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ 1.35 ಲಕ್ಷ ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ.