ನ್ಯೂಸ್

ಅಪ್ರಾಪ್ತೆಯ ಕೈ ಹಿಡಿದು ಪ್ರಪೋಸ್​ ಮಾಡಿದ ಯುವಕನಿಗೆ ಕಠಿಣ ಕಾರಾಗೃಹ ಶಿಕ್ಷೆ; ನ್ಯಾಯಾಧೀಶರು ಹೇಳಿದ್ದಿಷ್ಟು

ಮುಂಬೈ: ಅಪ್ರಾಪ್ತ ವಯಸ್ಕಳ ಕೈ ಹಿಡಿದು ಪ್ರಪೋಸ್​ ಮಾಡಿದ ಯುವಕನಿಗೆ ಕೋರ್ಟ್​ ಪೋಕ್ಸೋ ಕಾಯ್ದೆಯಡಿ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಯುವಕನ ವರ್ತನೆ ಬಾಲಕಿಯ ಘನತೆಗೆ ಕುತ್ತು ತಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ಸೆಪ್ಟೆಂಬರ್​ 2019ರಂದು ಬಾಲಕಿ ಟೀ ಪುಡಿ ತರಲೆಂದು ಮನೆ ಬಳಿ ಇರುವ ಅಂಗಡಿಗೆ ಹೋಗಿದ್ದಾಳೆ. ಅಂಗಡಿಯಿಂದ ಬಾಲಕಿಯನ್ನು ಹಿಂಬಾಲಿಸಲು ಶುರು ಮಾಡಿದ ಆರೋಪಿಯು ಆಕೆಯ ಮನೆ ಬಾಗಿಲ ತನಕ ಬಂದು ಕೈ ಹಿಡಿದು ಐ ಲವ್​ ಯೂ ಎಂದು ಹೇಳಿ ಬಳಿಕ ಈ ವಿಚಾರ ಮನೆಯಲ್ಲಿ ಹೇಳಬೇಡ ಎಂದು ಗದರಿಸಿ ಓಡಿ ಹೋಗಿದ್ದಾನೆ.

ಆರೋಪಿಯ ವರ್ತನೆಯಿಂದ ಹೆದರಿದ ಬಾಲಕಿಯು ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಸಾಕಿನಾಕಾ ಪೊಲೀಸ್​ ಠಾಣೆಯಲ್ಲಿ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಡಿಸೆಂಬರ್​ 20, 2019ರಂದು ಪೋಕ್ಸೋ ಕಾಯ್ದೆಯಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಆರೋಪಿಯನ್ನು ಕಳೆದ ವರ್ಷ ಸೆಪ್ಟೆಂಬರ್​ 05ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಯುವಕ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದರ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಆರೋಪಿಯ ಪರ ವಕೀಲರು ಇದಕ್ಕೆ ಆಕ್ಷೇಪಿಸಿದ್ದು, ಯುವಕ ಹಾಗೂ ಬಾಲಕಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಎಲ್ಲಿ ಮನೆಯಲ್ಲಿ ತಿಳಿದರೆ ತನಗೆ ಮುಳುವಾಗುತ್ತದೆ ಎಂದು ಬಾಲಕಿ ಈ ರೀತಿ ಸುಳ್ಳು ಹೇಳಿದ್ದಾಳೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.

ಆರೋಪಿ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅಶ್ವಿನಿ ಲೋಖಂಡೆ ಇಬ್ಬರು ಪ್ರೀತಿಯಲ್ಲಿದ್ದರೆ, ಈ ವಿಚಾರ ಅಳುತ್ತಾ ತಾಯಿಯಲ್ಲಿ ಹೇಳುವ ಪ್ರಸಂಗ ಬಾಲಕಿಗೆ ಬರುತ್ತಿರಲಿಲ್ಲ. ಪೋಷಕರಿಗೆ ಈ ವಿಚಾರವನ್ನು ಮುಚ್ಚಿಡುತ್ತಿದ್ದಳು. ಸುದೀರ್ಘ ವಿಚಾರಣೆಯಲ್ಲಿ ಯುವಕ ತಪ್ಪಿತಸ್ಥ ಎಂದು ತಿಳಿದು ಬಂದಿದ್ದು, ಆತನಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತೀರ್ಪು ನೀಡಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಜಡ್ಜ್​ ಹಾಗೂ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.