ನ್ಯೂಸ್

ಗಲಭೆ ಕೇಸ್ ವಾಪಸ್ ಪಡೆದಿದ್ದ ರಾಜ್ಯ ಸರ್ಕಾರಕ್ಕೆ ಕೋರ್ಟ್ ಛೀಮಾರಿ: ಬೊಮ್ಮಾಯಿ |Commitment to the interests of the state

ಬೆಂಗಳೂರು: ರಾಜಕೀಯ ಒತ್ತಡಕ್ಕೆ ಮಣಿದು ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಗಲಭೆ ಸೃಷ್ಟಿಸಿದವರ ವಿರುದ್ಧದ ಕೇಸ್ ಗಳನ್ನು ವಾಪಸ್ ಪಡೆದಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಪೀಠ ಛೀಮಾರಿ ಹಾಕಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದವು. ಇಂತಹ ಕೇಸ್ ಗಳನ್ನು ಹಿಂಪಡೆಯುವುದು ಸರಿಯಲ್ಲವೆಂದು ಹೇಳಿದ್ದೆ. ಇದೀಗ ಹೈಕೋರ್ಟ್ ಪೀಠ ನೀಡಿದ ಆದೇಶದಲ್ಲಿ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲವೆಂದೇ ಹೇಳಿದೆ ಎಂದರು.

ಕ್ರಿಮಿನಲ್ ಕೇಸ್ ಹಿಂತೆಗೆತ ಸರಿಯಲ್ಲವೆಂದು ಹೇಳಿದರೂ ರಾಜಕೀಯ ಒತ್ತಡ, ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದೆ. ರಾಜ್ಯದ ಸಚಿವ ಸಂಪುಟ, ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು, ಓಲೈಕೆ ರಾಜಕಾರಣವಲ್ಲ ಎಂದು ಕುಟುಕಿದರು.

ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ರಾಜ್ಯದ ಮೇಲೆ ಆಗಿರುವ  ದಾಳಿಯೆಂದೇ ಪರಿಗಣಿಸಬೇಕು. ಹೈಕೋರ್ಟ್ ಪೀಠದ ಆದೇಶದಿಂದ ರಾಜ್ಯ ಸರ್ಕಾರ ಪಾಠ ಕಲಿತು, ಇನ್ನಾದರೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಂತಹ ಪ್ರಕರಣಗಳಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

ಕಮಲ್ ಹಾಸನ್ ದೊಡ್ಡ ಪಂಡಿತನೇನಲ್ಲ

ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ಮಾತನಾಡುವಷ್ಟು ನಟ ಕಮಲ್ ಹಾಸನ್ ದೊಡ್ಡ ಪಂಡಿತನೇನನಲ್ಲ. ತಮ್ಮ ಇತಿ ಮಿತಿಯೊಳಗಿರಬೇಕು. ಭಾಷೆಯ ಬಗೆಗಿನ ಮಾತುಗಳು ಹಿಡಿತದಲ್ಲಿರಬೇಕು ಎಂದು ಚಾಟಿ ಬೀಸಿದರು.

 ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಭಾಷೆಯ ಪ್ರಾಚೀನತೆ ಹಲವಾರು ವಿಧಾನದಲ್ಲಿರಲಿದೆ. ಕನ್ನಡ ಭಾಷೆ ಬಗ್ಗೆ ಹಗುರ ಮಾತುಗಳು ಸರಿಯಲ್ಲ. ನಟ ಕಮಲ್ ಹಾಸನ್ ತಮ್ಮ ವ್ಯಕ್ತಿತ್ವ, ಘನತೆ ಉಳಿಸಿಕೊಳ್ಳಲು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಲೇಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.