ಶಿವಮೊಗ್ಗ: ವೈದ್ಯಕೀಯ ವಿಮಾ ಮೊತ್ತ ಪಾವತಿಸಲು ಅಸಹಕಾರ ತೋರುವ ಮೂಲಕ ಸೇವಾ ನ್ಯೂನತೆ ಎಸಗಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 1,23,949 ರೂ. ವಿಮಾ ಮೊತ್ತವನ್ನು ಬಡ್ಡಿಯೊಂದಿಗೆ ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದೆ.
ಎಂ.ಎಸ್.ಶಿವರಾಮ್ ಎಂಬುವವರು ಸಂಸ್ಥೆಯ ಉದ್ಯೋಗಿಗಳಿಗೆ ಗುಂಪು ವಿಮೆ ಮಾಡಿಸಿದ್ದರು. ವಿಮಾದಾರನೊಬ್ಬ ಮಗನನ್ನು ಶಿವಮೊಗ್ಗದ ಖಾಸಗಿ ಆಸ್ಪತೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಕ್ಕೆ 1,23,949 ರೂ. ವೆಚ್ಚವಾಗಿದೆ. ಬಳಿಕ ವೈದ್ಯಕೀಯ ವೆಚ್ಚ ಮರುಪಾವತಿ ಸಂಬಂಧ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಿಮಾ ಕಂಪನಿಗೆ ನೀಡಿದ್ದರು. ಆದರೆ ವಿಮಾ ಕಂಪನಿ 50 ಸಾವಿರ ರೂ. ಮಾತ್ರ ಪಾವತಿಸಿತ್ತು. ಉಳಿದ ಹಣ ನೀಡಲು ನಿರಾಕರಿಸಿತ್ತು ಎಂದು ಶಿವರಾಮ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಆಯೋಗವು ವಿಮೆದಾರರಿಗೆ ನೀಡಿದ್ದ ಆಟೋ ಅಪ್ರೂವಲ್ ಲೆಟರ್, ಆಟೋ ಡಿನೈಯಲ್ ಲೆಟರ್, ಆಸ್ಪತ್ರೆಯ ಡಿಸ್ಚಾರ್ಜ್ ಸಮ್ಮರಿ, ಮೆಡಿಕಲ್ ಬಿಲ್, ವಿಮೆಯ ಷರತ್ತುಗಳನ್ನು ಪರಿಶೀಲಿಸಿ, ಎರಡು ಕಡೆಯಿಂದ ವಾದ ಹಾಗೂ ಪ್ರತಿವಾದ ಆಲಿಸಿ ವಿಮಾ ಕಂಪನಿಯು ಸೇವಾ ನ್ಯೂನತೆ ತೋರಿರುವುದನ್ನು ಎತ್ತಿ ಹಿಡಿದಿತ್ತು. ಅರ್ಜಿದಾರರಿಗೆ ವೈದ್ಯಕೀಯ ವೆಚ್ಚದ ಮೊತ್ತ 1,23,949ರೂ.ಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಆದೇಶದ ದಿನಾಂಕದಿಂದ ವಾರ್ಷಿಕ ಶೇ.12ರ ಬಡ್ಡಿಯನ್ನು ಪೂರ್ಣ ಹಣ ನೀಡುವವರೆಗೂ ಪಾವತಿಸಬೇಕು. ಅರ್ಜಿದಾರರಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ 20 ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು 10 ಸಾವಿರ ರೂ. ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.