ಬೆಂಗಳೂರು: ನಟ ಸುದೀಪ್ ವಿರುದ್ಧ ಯಾವುದೇ ರೀತಿಯ ಮಾನಹಾನಿ ಹೇಳಿಕೆ ನೀಡದಂತೆ ಚಿತ್ರ ನಿರ್ಮಾಪಕ ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್‌ಗೆ ನಿರ್ಬಂಧ ವಿಧಿಸಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಿರಲು ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸುಂತೆ ಕೋರಿ ಸುದೀಪ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಗರದ 11ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಈ ಆದೇಶ ಮಾಡಿದೆ.
ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಸುದೀಪ್‌ಗೆ ಚಿತ್ರದಲ್ಲಿ ನಟಿಸಲು ಹಣ ನೀಡಲಾಗಿತ್ತು.
ಇತರರಿಗೂ ಮುಂಗಡ ಹಣ ಕೊಡಿಸಿದ್ದರು. ಆರ್.ಆರ್.ನಗರದಲ್ಲಿ ಆಸ್ತಿ ಖರೀದಿಸಲು ಮುಂಗಡವಾಗಿ ಹಣ ಪಡೆದಿದ್ದರು. ಭಾರಿ ಹಣವನ್ನು ಸ್ವೀಕರಿಸಿದ ಬಳಿಕವೂ ಸುದೀಪ್ ಕೈಗೆ ಸಿಗುತ್ತಿಲ್ಲ. ಆ ಮೂಲಕ ತಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಸಿವಿಲ್ ಕೋಟ್‌ಗೆ ಅರ್ಜಿ ಸಲ್ಲಿಸಿದ್ದ ಸುದೀಪ್, ನಿರ್ಮಾಪಕರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ್ದ ವರ್ಚಸ್ಸಿಗೆ ಧಕ್ಕೆಯಾಗಿದೆ. ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ನಿರ್ಮಾಪಕರ ವಿರುದ್ಧ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸುವಂತೆ ಕೋರಿದ್ದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.