ಕೊಚ್ಚಿ: ಹಿಂದುಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಭಾವನೆಗಳನ್ನು, ನಡವಳಿಕೆಗಳನ್ನು ಪ್ರದರ್ಶಿಸುತ್ತಿದ್ದ ರೆಹಾನಾ ಫಾತಿಮಾಗೆ ದೃಶ್ಯ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸದಂತೆ ಕೇರಳ ಹೈಕೋರ್ಟ್ ತಾತ್ಕಾಲಿಕ ನಿಷೇಧ ಹೇರಿದೆ.
ಸೋಮವಾರ, ಶನಿವಾರ ಹಾಜರಾಗಬೇಕು.. ರೆಹಾನಾ ಪ್ರತಿ ಸೋಮವಾರ ಮತ್ತು ಶನಿವಾರ ಬೆಳಗ್ಗೆ 9 ರಿಂದ 10ರೊಳಗೆ ಪತ್ತನಂತಿಟ್ಟದಲ್ಲಿರುವ ವಿಚಾರಣಾಧಿಕಾರಿ ಎದುರು ಹಾಜರಾಗಿ ಸಹಿ ಹಾಕಬೇಕು. ಆಕೆ ಎರ್ನಾಕುಲಂನಲ್ಲಿ ಇದ್ದರೆ ಅಲ್ಲಿ ಕೂಡ ಹೋಗಿ ಸಹಿ ಹಾಕಬೇಕು. ಈ ರೀತಿ ಮೂರು ತಿಂಗಳು ಮಾಡಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ಕೋರ್ಟ್ ರೆಹಾನಾಗೆ ನಿರ್ದೇಶಿಸಿದೆ.
ಅಯ್ಯಪ್ಪ ಭಕ್ತರ ಭಾವನೆಗಳನ್ನು ಘಾಸಿಗೊಳಿಸುವಂತೆ ಫೇಸ್ಬುಕ್ ಪೋಸ್ಟ್ ಮಾಡಿದ 2018ರ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ತನಕ ರೆಹಾನಾ ಫಾತಿಮಾ ಯಾವುದೇ ಭಾವನೆಗಳನ್ನು, ಅಭಿಪ್ರಾಯಗಳನ್ನು ದೃಶ್ಯ ಹಾಗೂ ಇಲೆಕ್ಟ್ರೋನಿಕ್ ಮೀಡಿಯಾ ಮೂಲಕ ವ್ಯಕ್ತಪಡಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸುನಿಲ್ ಥಾಮಸ್ ಆದೇಶ ನೀಡಿದ್ದಾರೆ.
2018ರ ಕೇಸ್ನಲ್ಲಿ ರೆಹಾನಾಗೆ ಜಾಮೀನು ಲಭಿಸಿದೆ. ಆದರೆ, ಆಕೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದು, ಅಡುಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಆಕೆಯ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ದೂರು ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ಥಾಮಸ್ ನಿಷೇಧದ ಈ ತೀರ್ಪು ನೀಡಿದರು.