ಬ್ರಿಟನ್: ಮದುವೆ ಎಂದರೆ ಅದೊಂದು ಹಬ್ಬ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ಸಂಭ್ರಮಿಸುವ ಕಾಲದಲ್ಲಿ ನಾವಿದ್ದೇವೆ. ಆದರೆ ಈ ಒಂದು ಜೋಡಿ ಹಾಗಲ್ಲ... ಮನೆ ಖರೀದಿಸಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ಇವರು ಅತಿ ಸಾಮಾನ್ಯವಾಗಿ ಮದುವೆಯಾಗಿದ್ದಾರೆ.
ಬ್ರಿಟನ್ನ ಬೆಥ್ ಬೇಟ್ಸ್ ಮತ್ತು ಜ್ಯಾಕ್ ಸಿಂಪಲ್ ಮದುವೆಯಾದ ಜೋಡಿ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿದ್ದು, ಒಂದು ಮಗುವನ್ನೂ ಹೊಂದಿದ್ದಾರಂತೆ. ಈ ಮಧ್ಯೆ ಆದಷ್ಟು ಬೇಗ ಮದುವೆಯಾಗಿ ಎಂದು ಕುಟುಂಬ ಒತ್ತಾಯಿಸಲು ಆರಂಭಿಸಿದೆ. ಮದುವೆಗೆ ನೂರಾರು ಮಂದಿ ಬರಬೇಕೆಂದು ಕುಟುಂಬಸ್ಥರು ಯೋಜನೆ ಹಾಕಿಕೊಂಡಿದ್ದರಂತೆ. ಆದರೆ ಅದಕ್ಕೆ ಒಪ್ಪದ ವಧು ವರ, ಬೇರೆಯದ್ದೇ ರೀತಿಯಲ್ಲಿ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಸಾಮಾನ್ಯವಾಗಿ ಬ್ರಿಟನ್ನಲ್ಲಿ ಒಂದು ಮದುವೆಗೆ ಸರಾಸರಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ ಈ ಜೋಡಿ ಕೇವಲ 40 ಸಾವಿರ ರೂಪಾಯಿ ಖರ್ಚು ಮಾಡಿ ಮದುವೆಯಾಗಿದೆ.
ಇವರ ಮದುವೆಗೆ ವಧು ಮತ್ತು ವರ ಎರಡೂ ಕಡೆಯಿಂದ ಕೇವಲ ಮೂರು ಮಂದಿ ಅತಿಥಿಗಳು ಬಂದಿದ್ದರಂತೆ. ದಾರಿಯಲ್ಲಿ ಹೋಗುತ್ತಿದ್ದ ಯಾರನ್ನೋ ಕರೆದು ಮದುವೆ ಫೋಟೋ ತೆಗೆಸಿಕೊಂಡಿದ್ದಾರಂತೆ. ಮದುವೆಗೆ ವಧು ತೊಟ್ಟ ಗೌನ್ ಬೆಲೆ ಕೇವಲ 2 ಸಾವಿರ ರೂಪಾಯಿಯಾಗಿತ್ತಂತೆ.
ಈ ರೀತಿ ಉಳಿಸಿದ ಹಣದಲ್ಲಿ ನವದಂಪತಿ ಮೂರು ಬೆಡ್ರೂಂ ಇರುವ ಮನೆಯೊಂದನ್ನು ಖರೀದಿಸಿದ್ದಾರೆ. (ಏಜೆನ್ಸೀಸ್)