Vector illustration in HD very easy to make edits. 
ನ್ಯೂಸ್

ಕುಂಬಾರಪೇಟೆ ಅಂಗಡಿಯಲ್ಲಿ ಜೋಡಿ ಕೊಲೆ: ಆಸ್ತಿ ವಿಚಾರಕ್ಕೆ ಸಂಬಂಧಿಕನಿಂದ ಕೃತ್ಯ

ಬೆಂಗಳೂರು: ಆಸ್ತಿಯ ವಿಚಾರಕ್ಕೆ ಸಂಬಂಧಿಕನೇ ಬರ್ಬರವಾಗಿ ಜೋಡಿ ಕೊಲೆ ಮಾಡಿರುವ ಘಟನೆ ಕುಂಬಾರಪೇಟೆ ಅಂಗಡಿಯೊಂದರಲ್ಲಿ ನಡೆದಿದೆ.
ವ್ಯಾಪಾರಿ ಸುರೇಶ್(೫೫) ಈತನ ಸ್ನೇಹಿತ ಮಹೇಂದ್ರ(೫೮) ಕೊಲೆಯಾದವರು.


ಬುಧವಾರ ರಾತ್ರಿ ೮ ಗಂಟೆಯ ಸುಮಾರಿಗೆ ಕುಂಬಾರಪೇಟೆಯಲ್ಲಿರುವ ಹರಿ ಮಾರ್ಕೇಟಿಂಗ್ ಎಂಬ ಕಿಚನ್ ಉಪಕರಣ ಮಾರಾಟ ಮಾಡುವ ಅಂಗಡಿಗೆ ನುಗ್ಗಿರುವ ದುಷ್ಕರ್ಮಿಯೊಬ್ಬ ಇಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆಸ್ತಿ ವಿಚಾರಕ್ಕೆ ಸಂಬಂಧಿಕನೇ ಇಬ್ಬರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಠಾಣೆ ಪೊಲೀಸರು ಭದ್ರಿಪ್ರಸಾದ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.


ರಕ್ಷಣೆ ಮಾಡಲು ಮುಂದಾದವನ ಹತ್ಯೆ:
ಕೊಲೆಯಾದ ಸುರೇಶ್ ಮತ್ತು ಪೊಲೀಸರ ವಶದಲ್ಲಿರುವ ಆರೋಪಿ ಭದ್ರ ಇಬ್ಬರು ದೂರದ ಸಂಬಂಧಿಕರಾಗಿದ್ದು, ಆಸ್ತಿಯ ವಿಚಾರವಾಗಿ ಜಗಳವಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರ, ಸುರೇಶ್‌ನನ್ನು ಕೊಲೆ ಮಾಡಲು ಉಪ್ಪಾರಪೇಟೆಯ ಅಂಗಡಿಗೆ ಬುಧರಾತ್ರಿ ಆಗಮಿಸಿದ್ದ. ಅಂಗಡಿಗೆ ಬಂದವನೆ ಏಕಾಏಕಿ ಚಾಕುವಿನಿಂದ ಸುರೇಶ್ ಮೇಲೆ ಹಲ್ಲೆ ಮುಂದಾಗಿದ್ದ ಈ ವೇಳೆ ಆತನ ರಕ್ಷಣೆಗೆ ಧಾವಿಸಿದ್ದ ಮಹೇಂದ್ರನ ಮೇಲು ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಸುರೇಶ್ ಮತ್ತು ಮಹೇಂದ್ರ ಇಬ್ಬರು ಸ್ನೇಹಿತರಾಗಿದ್ದು, ಸುರೇಶ್ ಅಂಗಡಿಗೆ ಮಹೇಂದ್ರ ಬಂದಿದ್ದ ಗೆಳೆಯ ಮೇಲೆ ಹಲ್ಲೆಯಾಗುತ್ತಿರುವುದನ್ನು ಗಮನಿಸಿ ಕೂಡಲೇ ಆತನ ರಕ್ಷಣೆಗೆ ಧಾವಿಸಿದ್ದಾನೆ ಆದರೆ ಆತನ ಮೇಲೆಯೂ ಚಾಕುವಿನಿಂದ ಆರೋಪಿ ಭದ್ರಿ ಪ್ರಸಾದ್ ಹಲ್ಲೆ ನಡೆಸಿದ್ದಾನೆ. ಇರಿತಕ್ಕೆ ಒಳಗಾದ ಸುರೇಶ್ ಅಂಗಡಿಯ ಒಳಗಡೆ ಇದ್ದ ಕುರ್ಚಿ ಮೇಲೆಯೇ ಒದ್ದಾಡಿ ಪ್ರಾಣಬಿಟ್ಟದ್ದು, ಮಹೇಂದ್ರ ಅಂಗಡಿಯ ಹೊರಗಡೆ ಬಿದ್ದು ಒದ್ದಾಡಿ ಪ್ರಾಣಬಿಟ್ಟಿದ್ದಾನೆ. ಇನ್ನು ಆರೋಪಿ ಭದ್ರಿ ಪ್ರಸಾದ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಎಲೆಕ್ಟ್ರಿಕಲ್ ಶಾಪ್ ಇಟ್ಟುಕೊಂಡಿದ್ದಾನೆ. ಸುರೇಶ್‌ಗೂ ಹಾಗೂ ಭದ್ರಿಪ್ರಸಾದ್‌ಗೆ ಆಸ್ತಿಯ ವಿಚಾರಕ್ಕೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಆಗಮಿಸಿದ್ದ ಆದರೆ ಆತನ ರಕ್ಷಣೆಗೆ ಮುಂದಾಗಿದ್ದ ಮಹೇಂದ್ರನನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮಗನ ಗೋಳಾಟ:
ಅಪ್ಪ ಮಹೇಂದ್ರ ಕೊಲೆಯ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಹೇಂದ್ರನ ಪುತ್ರ ನನಗೆ ಅಪ್ಪ ಬೇಕು. ಅಪ್ಪನನ್ನು ನೋಡಲು ಮತ್ತು ಮುಟ್ಟಲು ಬಿಡಿ ಎಂದು ಗೋಳಾಡುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು.

ಬುಧವಾರ ರಾತ್ರಿ ೮ ರಿಂದ ೮ ೩೦ ರ ಸಮಯದಲ್ಲಿ ಕುಂಬಾರಪೇಟೆಯ ಅಂಗಡಿಯೊಂದರಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಕನೇ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ಮುಂದುವರಿದಿದೆ.
ಎಚ್.ಟಿ.ಶೇಖರ್, ಕೇಂದ್ರ ವಿಭಾಗದ ಡಿಸಿಪಿ