ಚೆನ್ನೈ: ಫ್ಯಾನ್ಸ್ ಗಳು ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆದಾಗ ಥಿಯೇಟರ್ ಒಳಗೆ ಚಪ್ಪಾಳೆ ತಟ್ಟುವುದು, ಶಿಳ್ಳೆ ಹೊಡೆಯುವುದು, ಕುಣಿಯುವುದನ್ನು ನೋಡುತ್ತೇವೆ. ಆದರೆ ಇಲ್ಲೊಂದು ಜೋಡಿ ಥಿಯೇಟರ್ ಒಳಗೆ ಉಂಗುರ ಬದಲಿಸಿಕೊಂಡಿದ್ದಾರೆ.
ವಿಜಯ್ ‘ಲಿಯೋ’ ಸಿನಿಮಾ ಶುರುವಾಗಿದೆ. ಎಲ್ಲೆಡೆ ಪಟಾಕಿ ಹಚ್ಚಿ ಥಿಯೇಟರ್ ಮುಂದೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ‘ಲಿಯೋ’ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವೆಂಕಟೇಶ್ ಮತ್ತು ಮಂಜುಳಾ ಜೋಡಿ ದಳಪತಿ ವಿಜಯ್ ಅಭಿಮಾನಿಗಳು. ವಿಜಯ್ ಮೇಲಿನ ತಮ್ಮ ಕ್ರೇಜ್ ಅನ್ನು ಸಾಬೀತುಪಡಿಸಿದ ದಂಪತಿ ಥಿಯೇಟರ್ ಒಳಗೆ ಹಾರ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡರು.
'ಲಿಯೋ' ಚಿತ್ರದ ಪ್ರದರ್ಶನದ ನಂತರ ಥಿಯೇಟರ್ ಒಳಗೆ ವೆಂಕಟೇಶ್ ಮತ್ತು ಮಂಜುಳಾ ಪ್ರೇಕ್ಷಕರ ಮುಂದೆ ಬಂದು ಹಾರ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವಿಡಿಯೋ ವೈರಲ್ ಆಗಿದೆ. ನಾಳೆ ಅಧಿಕೃತವಾಗಿ ಈ ಜೋಡಿ ಮದುವೆಯಾಗುತ್ತಿದ್ದಾರೆ.
ಸಿನಿಮಾ ರಿಲೀಸ್ ಆದಾಗ ಮದುವೆ ಆಗಲಿ ಎಂದು ಎಂಟು ತಿಂಗಳಿಂದ ಈ ಯೋಜನೆ ಹಾಕಿಕೊಂಡಿದ್ದೆ ಎಂದು ವೆಂಕಟೇಶನ್ ಹೇಳಿದ್ದಾರೆ.
'ಲಿಯೋ' ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್ . ಚಿತ್ರದ ಚಿತ್ರಕಥೆಯನ್ನು ರತ್ನ ಕುಮಾರ್ ಮತ್ತು ದೀರಜ್ ವೈದಿ ಸಹ-ಬರೆದಿದ್ದಾರೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಸುದ್ದಿಯಾಗುತ್ತಲೇ ಇದೆ.
ಪ್ರಮುಖ ಪಾತ್ರಗಳಲ್ಲಿ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಸ್ಯಾಂಡಿ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ನಿರ್ಮಿಸಿರುವ 'ಲಿಯೋ' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.