ನ್ಯೂಸ್

ನಮಗೆ ನಾಯಿಯೂ ಮಗಳ ಥರ ಎಂದು ಸೀಮಂತ ಮಾಡಿದ ದಂಪತಿ!

ಹೈದರಾಬಾದ್: 'ಎವೆರಿ ಡಾಗ್ ಹ್ಯಾಸ್ ಇಟ್ಸ್​ ಓನ್ ಡೇ..' ಎಂದು ಇಂಗ್ಲಿಷ್​ನಲ್ಲಿ ಒಂದು ಮಾತಿದೆ. ಅದು ಅಕ್ಷರಶಃ ಸತ್ಯ ಎನಿಸುವಂಥ ಸಮಾರಂಭವೊಂದು ಇತ್ತೀಚೆಗೆ ನಡೆದಿದೆ. ಅದೇನೆಂದರೆ, ಇಲ್ಲೊಂದು ದಂಪತಿ ನಾಯಿಗೂ ಸೀಮಂತ ಮಾಡಿಸಿ, ತಮ್ಮ ನೆಂಟರಿಷ್ಟರಿಗೆಲ್ಲ ಆಹ್ವಾನ ನೀಡಿ ಊಟ ಹಾಕಿಸಿ ಕಳುಹಿಸಿದ್ದಾರೆ.

ಅಂದಹಾಗೆ ಆ ಅದೃಷ್ಟವಂತ ನಾಯಿಯ ಹೆಸರು ಸ್ಟೆಫಿ. ಒಂದೂವರೆ ವರ್ಷದ ಈ ಹೆಣ್ಣುನಾಯಿಗೆ ತೆಲುಗರ ಸಂಪ್ರದಾಯದಂತೆ ಸೀಮಂತ ಮಾಡಲಾಗಿದೆ. ತೆಲಂಗಾಣದ ನವಕುಮಾರ್-ಆಶಾ ದಂಪತಿ ಈ ನಾಯಿಯನ್ನು ಸಾಕಿದ್ದು, ಕಳೆದ ವಾರ ಅವರು ಹಾಗೂ ಅವರ ಪತ್ನಿ ಜೊತೆಯಾಗಿ ನಾಯಿಗೆ ಸೀಮಂತ ಏರ್ಪಡಿಸಿ, ಸಂಭ್ರಮ ಪಟ್ಟಿದ್ದಾರೆ.

ಸ್ಟೆಫಿ ನಮಗೆ ಮಗಳ ಥರ ಎನ್ನುವ ಈ ದಂಪತಿ, ಈ ನಾಯಿಯ ಮೊದಲ ಜನ್ಮದಿನವನ್ನೂ ಹೀಗೇ ಮನುಷ್ಯರ ಜನ್ಮದಿನವನ್ನು ಆಚರಿಸುವಂತೆಯೇ ಆಚರಣೆ ಮಾಡಿದ್ದಾಗಿಯೂ ಹೇಳಿದ್ದಾರೆ. ಕಳೆದ ಅಕ್ಟೋಬರ್​ನಲ್ಲಿ ನಾವು ಸ್ಟೆಫಿಯ ಮೊದಲ ಬರ್ತ್​ಡೇ ಆಚರಿಸಿ ನೆಂಟರಿಷ್ಟರಿಗೆಲ್ಲ ಊಟ ಹಾಕಿಸಿದ್ದೆವು. ಈ ಸಲ ಸ್ಟೆಫಿ ಗರ್ಭವತಿ ಆದಾಗ ಯಾಕೆ ಅದೇರೀತಿ ಅವಳ ಸೀಮಂತ ಮಾಡಬಾರದು? ಸ್ಟೆಫಿಯೂ ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯಳಂತೆಯೇ ಆಗಿರುವುದರಿಂದ ಈ ಸೀಮಂತ ಮಾಡಿದ್ದಾಗಿ ಆ ದಂಪತಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)