ನ್ಯೂಸ್

ಇವರು ಅಂತಿಂಥಾ ಕಳ್ಳರಲ್ಲ, ಬಿಯರ್ ಅಂದ್ರೆ ಪ್ರಾಣ ಬಿಡೋ ಈ ದಂಪತಿ ಕಥೆ ಕೇಳಿ ಬೇಸ್ತು ಬೀಳ್ಬೇಡಿ!

ವಾಷಿಂಗ್ಟನ್​: ಚಿನ್ನ, ಬೆಳ್ಳಿ, ಹಣ, ಕಾರು ಬೈಕುಗಳನ್ನ ಕದಿಯುವವರು ನೋಡಿರುತ್ತೇವೆ. ಆದರೆ ಇಲ್ಲೊಂದು ದಂಪತಿ ಬಿಯರ್​ ಅಂಗಡಿಯಿಂದ ಬಿಯರ್​ ಬಾಟೆಲ್​ಗಳಲ್ಲೇ ಕದ್ದಿದ್ದು, ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಅಮೆರಿಕದ ಲೂಯಿಸಿಯಾನಾ ಮೂಲದ ದಂಪತಿಯಾದ ಮ್ಯಾಥ್ಯೂ ಫೋರ್ಬ್ಸ್​ (35) ಮತ್ತು ಆಶ್ಲೇ ಫೋರ್ಬ್ಸ್​ (32) ಕಳೆದ ವಾರ ಬಿಯರ್​ ಅಂಗಡಿಯೊಂದರಿಂದ ಸುಮಾರು 1000 ಡಾಲರ್​ (73,000 ರೂ.) ಮೌಲ್ಯದ ಬಿಯರ್​ ಬಾಟೆಲ್​ನ್ನು ಕದ್ದಿದ್ದಾರೆ. ಇವರ ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾನುವಾರದಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ದಂಪತಿಗಳು ಈ ರೀತಿಯ ಕಳ್ಳತನ ಮಾಡಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಕೆಲ ಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿಕೊಂಡಿದ್ದು ಅನೇಕ ಅಂಗಡಿಗಳನ್ನು ಇವರಿಬ್ಬರನ್ನು ನಿಷೇಧಿಸಿತ್ತು. ಫೆಬ್ರವರಿ 24ರಿಂದ 29ರೊಳಗೆ 16 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಲ್ಲಿ ಈ ದಂಪತಿ ಕಳ್ಳತನ ಮಾಡಿರುವುದು ವರದಿಯಾಗಿದೆ.

ಸದ್ಯ ಕಳ್ಳತನದ ಆರೋಪದ ಮೇಲೆ ದಂಪತಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಅದರ ಜತೆಯಲ್ಲಿ ಆಶ್ಲೇ ವಿರುದ್ಧ ಮಾದಕ ದ್ರವ್ಯ ಮಾರಾಟದ ಆರೋಪವೂ ಇದೆ ಎನ್ನಲಾಗಿದೆ. (ಏಜೆನ್ಸೀಸ್​)