ಮುಂಬೈ: ಕೋವಿಡ್-19 ಲಾಕ್ಡೌನ್ ಸಡಿಲಿಕೆಯಿಂದ ಮೊದಲ್ಗೊಂಡು ಅನ್ಲಾಕ್ 1.0 ಅವಧಿಯಲ್ಲಿ ದೇಶ ಪುನರುತ್ಥಾನದ ಹಾದಿಯಲ್ಲಿದೆ. ಅನ್ಲಾಕ್ 1.0 ಜಾರಿಗೆ ಬಂದ ನಂತರದಲ್ಲಿ ವಿವಿಧ ವಲಯಗಳಲ್ಲಿನ ನೇಮಕಾತಿ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ ಇದರ ಸುಳಿವು ಸಿಕ್ಕಿದೆ.
ಒಂದು ಮೂಲದ ಪ್ರಕಾರ ಎಜುಟೆಕ್, ಇ-ಕಾಮರ್ಸ್, ಡೇಟಾ ಪ್ರೊಸೆಸ್ಸಿಂಗ್, ವಿತರಣಾ ಜಾಲ ನಿರ್ವಹಣೆ, ಬ್ಯಾಂಕಿಂಗ್, ಎಫ್ಎಂಸಿಜಿ, ಆರೋಗ್ಯ ರಕ್ಷಣೆ, ವಿಮೆ, ಡಿಜಿಟಲ್ ತಜ್ಞರು, ಆರ್ಥಿಕ ವಲಯ ಮತ್ತು ಔಷಧ ವ್ಯವಹಾರಗಳ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.
ಕೋವಿಡ್ ಪೂರ್ವದ ಸಂದರ್ಭಕ್ಕೆ ಹೋಲಿಸಿದರೆ, ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ದೇಶಾದ್ಯಂತ ವಿವಿಧ ಉದ್ಯೋಗಗಳ ನೇಮಕಾತಿ ಪ್ರಮಾಣ ಶೇ.80 ಕುಸಿದಿತ್ತು. ಆದರೆ ಅನ್ಲಾಕ್ 1.0 ಆರಂಭವಾದ ನಂತರದಲ್ಲಿ ಉದ್ಯೋಗ ನೇಮಕಾತಿ ಕುಸಿತ ಪ್ರಮಾಣ ಶೇ.50 ಸುಧಾರಿಸಿದೆ ಎಂದು ಉದ್ಯೋಗ ನೇಮಕಾತಿ ವಲಯದ ತಜ್ಞರು ತಿಳಿಸಿದ್ದಾರೆ.
ವಿವಿಧ ವಲಯಗಳಲ್ಲಿ ನೇಮಕಾತಿ ಪ್ರಮಾಣ ಸಾಕಷ್ಟು ಸುಧಾರಿಸಿದೆ. ಈ ಆವೇಗ ಇನ್ನಷ್ಟು ಕಾಲ ಹೀಗೆ ಮುಂದುವರಿಯಲಿದೆ. ಆದರೆ ಪ್ರವಾಸೋದ್ಯಮದಂಥ ಕೆಲ ವಲಯಗಳಲ್ಲಿ ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.