ಬೆಂಗಳೂರು: ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ ೧೨ ಗಂಟೆವರೆಗೆ ನಗರದಲ್ಲಿ ೧೪೪ ಸೆಕ್ಷನ್ ಅಡಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಜನ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಜನ ಗುಂಪು ಸೇರುವುದು, ವಿಜಯೋತ್ಸವ ಮೆರವಣಿಗೆ ನಡೆಸುವುದು ಹಾಗೂ ಸಭೆ-ಸಮಾರಂಭಗಳನ್ನು ನಡೆಸುವುದಾಗಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಶನಿವಾರ ಸಂಜೆ ೪ ಗಂಟೆಯಿಂದಲೇ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದು, ಮಂಗಳವಾರ ಮಧ್ಯರಾತ್ರಿ ೧೨ ಗಂಟೆಗೆ ವರೆಗೆ ಈ ನಿಷೇಧ ಮುಂದುವರಿಯಲಿದೆ.
ನಗರದ ಮೂರು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು ಉತ್ತರ ಕ್ಷೇತ್ರ- ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಬೆಂಗಳೂರು ದಕ್ಷಿಣ ಕ್ಷೇತ್ರ- ಜಯನಗರ ೪ ಟಿ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜು ಕೇಂದ್ರಗಳಲ್ಲಿ ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಸುಗಮವಾಗಿ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಿಗಿ ಭದ್ರತೆ:
ಮತ ಎಣಿಕೆ ದಿನ ಬಂದೋಬಸ್ತ್ ಕರ್ತವ್ಯಕ್ಕೆ ೧೫೨೪ ಪೊಲೀಸ್ ಅಧಿಕಾರಿ/ ಸಿಬ್ಬಂದಿ, ೧೩ ಸಶಸ್ತ್ರ ತುಕಡಿಗಳು ಹಾಗೂ ೪ ಕ್ಷಿಪ್ರ ಕಾರ್ಯ ಪಡೆಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಸ್ಟ್ರಾಂಗ್ ರೂಮ್ ಭದ್ರತೆಗಾಗಿ ದಿನದ ಮೂರು ಪಾಳಿಯಲ್ಲಿ ೫೧೬ ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮತ್ತು ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸುಗಮ ಸಂಚಾರಕ್ಕಾಗಿ ೪೦೦ಕ್ಕೂ ಅಧಿಕ ಸಂಚಾರ ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮತ ಎಣಿಕೆ ಸಂಬಂಧ ಒಟ್ಟು ೨,೪೦೦ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಅಂತೆಯೆ ನಗರದ ಎಲ್ಲಾ ಪೊಲೀಸ್ ಠಾಣಾಗಳ ವ್ಯಾಪ್ತಿಯಲ್ಲಿಯೂ ಸಹ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕಾರಿ/ ಸಿಬ್ಬಂದಿಯೊಂದಿಗೆ ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳನ್ನೂ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.