ಸಾಗರ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದ್ದು. ಸ್ಥಳೀಯ ನಿವಾಸಿಗಳು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿದ್ದಾರೆ.
ಕೇಂದ್ರ ಸಚಿವರು, ಸಂಸದರು, ರಾಜ್ಯ ಸಚಿವರು, ಶಾಸಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ನೂತನ ಸೇತುವೆ ಬಳಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ನೆಹರು ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಯನ್ನು ಸಜ್ಜುಗೊಳಿಸಲಾಗಿದೆ. ಪೊಲೀಸ್, ಹೋಂ ಗಾರ್ಡ್ಸ್ ಒಳಗೊಂಡಂತೆ 700ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಸಾಗರದಲ್ಲಿ ನಿರಂತರ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ನೆಹರು ಮೈದಾನದ ಅಲ್ಲಲ್ಲಿ ನೀರು ನಿಂತಿರುವುದು ಸರಿಪಡಿಸುವ ಕಾರ್ಯ ಯಂತ್ರಗಳ ಮೂಲಕ ನಡೆದಿದೆ. ಕಾರ್ಯಕ್ರಮಕ್ಕೆ 10 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.
ಹಬ್ಬದ ವಾತಾವರಣ: ಸುರಿಯುತ್ತಿರುವ ಮಳೆ ಮಧ್ಯೆಯೇ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆಗೆ ಕರೂರು-ಬಾರಂಗಿ ಹೋಬಳಿಯ ಜನತೆ ತಮ್ಮ ಮನೆಯಿಂದಲೇ ತಳಿರು ತೋರಣ, ಬಾಳೆ ಕಂಬ ತಂದು ಕಟ್ಟಿ ಸ್ವಯಂಪ್ರೇರಿತರಾಗಿ ಸಿಂಗಾರ ಮಾಡಿದ್ದಾರೆ. ಪ್ರತಿ ಊರಿನಿಂದ ಜನರು ಆಗಮಿಸಿ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯುತ್ ದೀಪಗಳಿಂದ ಅಲಂಕೃತವಾದ ಸೇತುವೆ ಮನಮೋಹಕವಾಗಿ ಕಾಣುತ್ತಿದೆ. ಶರಾವತಿ ಮುಳುಗಡೆ ಸಂತ್ರಸ್ತರು ಸಂಪರ್ಕವಿಲ್ಲದೆ ಲಾಂಚ್ ಮೂಲಕವೇ ಬದುಕು ಕಟ್ಟಿಕೊಂಡವರು. ಸುದೀರ್ಘ 60 ವರ್ಷಗಳ ನಂತರ ಸೇತುವೆ ಸಂಪರ್ಕದ ಮೂಲಕ ಸಂತಸ ಕಾಣುವಂತಾಗಿದೆ.
ಪೂರ್ವಭಾವಿ ಸಭೆಗಳು: ಹಿನ್ನೀರಿನ ಪ್ರದೇಶದಲ್ಲಿ ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಹಬ್ಬದ ರೀತಿ ನಡೆಯುತ್ತಿದೆ. ಕೇಂದ್ರದ ಸಚಿವರು ಸೇರಿ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಆಗಮನಕ್ಕಾಗಿ ಕಾಯುತ್ತಿದ್ದಾರೆ. ಜನತೆಗೆ ಕಾರ್ಯಕ್ರಮದ ಮಹತ್ವವನ್ನು ಪರಿಚಯಿಸಲು ಸಾಕಷ್ಟು ಸಭೆಗಳನ್ನು ಸೇತುವೆ ಹೋರಾಟ ಸಮಿತಿ ಸಂಚಾಲಕ ಪ್ರಸನ್ನ ಕೆರೆಕೈ ಮತ್ತು ಸಿಗಂದೂರು ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ. ಕರೂರು-ಬಾರಂಗಿ ಹೋಬಳಿಯ ಸಾಕಷ್ಟು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಯೋಗ, ಶಿಕ್ಷಣ ಮತ್ತಿತರ ಉದ್ದೇಶದಿಂದ ಬೇರೆಡೆ ನೆಲೆಸಿರುವ ಮಹಿಳೆಯರು, ಯುವಕ-ಯುವತಿಯರು ಈ ಕ್ಷಣದ ಸಂಭ್ರಮಕ್ಕಾಗಿ ಕಾಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಆರೋಪ-ಪ್ರತ್ಯಾರೋಪ: ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನಡುವೆ ಸೇತುವೆ ವಿಚಾರದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ನಡೆದಿವೆ. ಮತ್ತೊಂದೆಡೆ ಇದನ್ನು ಪಕ್ಷದ ಕಾರ್ಯಕ್ರಮವಾಗಿ ಬಿಂಬಿಸಲಾಗುತ್ತಿದೆ ಎಂದು ಬೇಳೂರು ಗಂಭೀರ ಆರೋಪ ಮಾಡಿದ್ದಾರೆ. ಇವೆಲ್ಲವನ್ನೂ ಗಮನಿಸಿರುವ ರಕ್ಷಣಾ ಇಲಾಖೆ ಬಂದೋಬಸ್ತ್‌ಗೆ ಬೇರೆ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕರೆಸಿದ್ದಾರೆ.