ನ್ಯೂಸ್

ಬಿಎಸ್‌ವೈ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಯಾರ್ಯಾರಿಗಿದೆ ಮಿನಿಸ್ಟರ್ ಆಗುವ ಭಾಗ್ಯ?

ಬೆಂಗಳೂರು: ರಾಜ್ಯದಲ್ಲಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಮಕರ ಸಂಕ್ರಾಂತಿಯ ಮುನ್ನಾದಿನವಾದ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, 8 ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಯಾರ್ಯಾರು ಮಂತ್ರಿಗಳಾಗಲಿದ್ದಾರೆ ಎಂಬುದರ ಗುಟ್ಟನ್ನು ಇನ್ನೂ ಪಕ್ಷದ ವರಿಷ್ಠರು ಬಿಟ್ಟು ಕೊಟ್ಟಿಲ್ಲವಾದರೂ ನಂಬಲರ್ಹ ಮೂಲಗಳ ಪ್ರಕಾರ, ಏಳು ಜನ ಹೊಸಬರು ಸಂಪುಟ ಸೇರಲಿದ್ದು, ಒಬ್ಬ ಹಾಲಿ ಸಚಿವರನ್ನು ಕೈಬಿಟ್ಟು ಒಬ್ಬ ಹೊಸಬರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಯಾರನ್ನು ಕೈಬಿಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಸ್. ಅಂಗಾರ, ಮುನಿರತ್ನ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಹೊಸದಾಗಿ ಮಂತ್ರಿಗಳಾಗುವ ಸಾಧ್ಯತೆ ಇದೆ. ಹಾಲಿ ಸಚಿವರಾಗಿರುವವರ ಪೈಕಿ ಯಾರನ್ನು ಕೈಬಿಡುತ್ತಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಎಚ್. ನಾಗೇಶ್ ಮುಂತಾದವರ ಪೈಕಿ ಯಾರಾದರೂ ಒಬ್ಬರು ಅಥವಾ ಇಬ್ಬರು ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.